ಹೊಸಪೇಟೆಯ ವಿಜಯನಗರ ಕಾಲೇಜಿನ ಪ್ರಾಚಾರ್ಯ ವಿ.ಎಸ್.ಪ್ರಭಯ್ಯ ಮತ್ತು ಮುಸ್ಲಿಂ ವಿದ್ಯಾರ್ಥಿನಿರ ನಡುವೆ ಸೋಮವಾರ ಹಿಜಾಬ್ ಕುರಿತು ಮಾತಿನ ಚಕಮಕಿ ನಡೆಯಿತು.  
ಜಿಲ್ಲೆ

ವಿಜಯನಗರ ಕಾಲೇಜಲ್ಲಿ ಹಿಜಾಬ್ ಕಿರಿಕ್

ಹೊಸಪೇಟೆ: ಹಿಜಾಬ್ ಕುರಿತು ಕೋರ್ಟ್ ಆದೇಶ ಬಂದ ಬಳಿಕ ವಿವಾದ ತಣ್ಣಗಾಯಿತು ಎನ್ನುವಷ್ಟರಲ್ಲಿ ಇಲ್ಲಿನ ವಿಜಯನಗರ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಸೋಮವಾರ ಹಿಜಾಬ್ ಧರಿಸಿಕೊಂಡು ಬಂದು ಹೈಡ್ರಾಮ ಮಾಡಿದರು.

ಎಂದಿನಂತೆ ಕಾಲೇಜಿಗೆ ಬಂದು ಹಿಜಾಬ್ ಕಳಚಿ ಕ್ಲಾಸ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ವಿದ್ಯಾರ್ಥಿನಿಯರು, ಸೋಮವಾರ ದಿಢೀರನೆ ಹಿಜಾಬ್ ಕಳಚುವುದಿಲ್ಲ ಎಂದು ಪಟ್ಟು ಹಿಡಿದರು. ಈಗ ಪದವಿ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿನಿಯರ ಈ ವರ್ತನೆಯಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಕೆಲ ವಿದ್ಯಾರ್ಥಿನಿಯರ ಪಾಲಕರು ಮತ್ತು ಕಾಲೇಜು ಪ್ರಾಚಾರ್ಯರ ನಡುವೆ ವಾಗ್ವಾದ ನಡೆಯಿತು. ಕೋರ್ಟ್ ಆದೇಶ ನೀಡಿರೋದು ಪಿಯುಸಿ ವಿದ್ಯಾರ್ಥಿಗಳಿಗೆ. ನಾವು ಪದವಿ ವಿದ್ಯಾರ್ಥಿಗಳು. ನಾವ್ಯಾಕೆ ಹಿಜಾಬ್ ಧರಿಸಬಾರದು ಎಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದು ಕುಳಿತರು. ಪ್ರತಿಕ್ರಿಯಿಸಿದ ಪ್ರಾಚಾರ್ಯ ವಿ.ಎಸ್.ಪ್ರಭಯ್ಯ, ‘ಹಿಜಾಬ್ ವಿಚಾರವಾಗಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ’ ಎಂದು ಗದರಿದರು. ನಂತರ ಎಚ್ಚೆತ್ತ ವಿದ್ಯಾರ್ಥಿನಿಯರು ಹಿಜಾಬ್ ಕಳಚಿ ಕಾಲೇಜಿನೊಳಗೆ ಹೋದರು.