ಹೊಸಪೇಟೆ: ಶಾಲೆ ಆರಂಭಿಸುವಂತೆ ಇಲಾಖೆ ಆದೇಶ ಹೊರಡಿಸಿದ್ದರೂ ನಗರದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಯಾವುದೇ ಸಿದ್ಧತೆ ಮಾಡಿಕೊಳ್ಳದ ಕಾರಣ ಸೋಮವಾರ ತರಗತಿಗಳು ತಡವಾಗಿ ಆರಂಭವಾದವು. ಶುದ್ಧ ಕುಡಿವ ನೀರಿನ ಘಟಕ, ಬೋರ್‌ವೆಲ್ ದುರಸ್ತಿ ಮಾಡಿಸಿಲ್ಲ. ಶೌಚಗೃಹ ಬಳಕೆಗೆ ಮಳೆ ನೀರು ಸಂಗ್ರಹಿಸಿಡಲಾಗಿದೆ. ಎಸ್ಡಿಎಂಸಿ ಹಾಗೂ ಆಡಳಿತ ಮಂಡಳಿ ನಡುವೆ ಸಮನ್ವಯ ಕೊರತೆಯಿಂದ ಶಾಲೆ ಮೂಲಸೌಕರ್ಯ ಇಲ್ಲವಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಕಣ್ಣೀರು ಹಾಕಿದ ಎಸ್ಡಿಎಂಸಿ ಅಧ್ಯಕ್ಷೆ: ಶಾಲೆ ಒಳಗೆ ನನ್ನನ್ನು ಬಿಡದೆ ಪ್ರಾಚಾರ್ಯೆ ಆರ್.ಸುಲೋಚನಾಬಾಯಿ ದರ್ಪ ತೋರುತ್ತಿದ್ದಾರೆ ಎಂದು ಎಸ್ಡಿಎಂಸಿ ಅಧ್ಯಕ್ಷೆ ಮಂಜುಳಾ ವಿಶ್ವನಾಥ್ ಮೆಟ್ಟಿಲು ಮೇಲೆ ಕುಳಿತು ಕಣ್ಣೀರು ಹಾಕಿದರು. ಶಾಲೆ ಒಳಗೆ ಹೋದರೆ ಸೌಲಭ್ಯಗಳ ಕೊರತೆ ಬಗ್ಗೆ ಪ್ರಶ್ನೆ ಮಾಡುತ್ತೇವೆಂದು ಯಾರನ್ನೂ ಬಿಡುತ್ತಿಲ್ಲ. ಶಾಲೆ ಅವಧಿಯಲ್ಲಿ ಯಾರ ಭೇಟಿಗೂ ಅವಕಾಶವಿಲ್ಲವೆಂದು ಡೋರ್‌ಗೆ ಚೀಟಿ ಅಂಟಿಸುವುದಾಗಿ ಮುಖ್ಯಶಿಕ್ಷಕಿ ಹೇಳುತ್ತಾರೆ ಎಂದು ಆರೋಪಿಸಿದರು.ಬೋರ್‌ವೆಲ್ ಕೆಟ್ಟಿರುವುದರಿಂದ ನೀರಿನ ಸಮಸ್ಯೆಯಾಗಿದೆ ಎಂದು ಪ್ರಾಚಾರ್ಯೆ ತಿಳಿಸಿದ್ದಾರೆ. ಕುಡಿವ ನೀರು ಹಾಗೂ ಬಳಕೆಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.| ಪಿ.ಸುನಂದಾ ಬಿಇಒ, ಹೊಸಪೇಟೆ