ಜಿಲ್ಲೆ

ಹೊಸಳ್ಳಿಯಲ್ಲಿ ಮತ್ತೆ 13 ಜನರಿಗೆ ಕರೊನಾ

Shivamogga

ಶಿವಮೊಗ್ಗ: ಭದ್ರಾವತಿ ತಾಲೂಕಿನ ಹೊಸಳ್ಳಿಯಲ್ಲಿ ಕರೊನಾ ಎರಡನೇ ಅಲೆ ಅಬ್ಬರ ಮುಂದುವರಿದಿದ್ದು ಸೋಮವಾರ ಮತ್ತೆ 13 ಜನರಿಗೆ ಕರೊನಾ ದೃಢಪಟ್ಟಿದೆ. ಇದರೊಂದಿಗೆ ಹೊಸಳ್ಳಿಯಲ್ಲಿ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಏ.8ರಂದು ನಾಗತಿಬೆಳಗಲು ನಂಜುಂಡೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಹೊಸಳ್ಳಿಯ ಆಶಾ ಕಾರ್ಯಕರ್ತೆ ಮಗಳ ಮದುವೆ ಕುಂಚೇನಹಳ್ಳಿ ಯುವಕನೊಂದಿಗೆ ನೆರವೇರಿತು. ಮೊದಲ ಬಾರಿಗೆ ಮೂವರಲ್ಲಿ ಸೋಂಕು ದೃಢಪಟ್ಟಿತ್ತು. ಆನಂತರ ತಪಾಸಣೆ ನಡೆಸಿದಾಗ ಹಂತ ಹಂತವಾಗಿ ಸೋಂಕು ಕಾಣಿಸಿಕೊಂಡಿದ್ದು ಅರ್ಧಶತಕದ ಗಡಿ ದಾಟಿದೆ. ಇನ್ನೂ ಹಲವರ ವರದಿ ಬಾಕಿ ಇದ್ದು ಸೋಂಕಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ನಡುವೆ ಕಳೆದ ಮೂರು ದಿನಗಳ ಹಿಂದೆ ಹೊಸಳ್ಳಿ ಅಕ್ಕಪಕ್ಕದ ಗ್ರಾಮಗಳಲ್ಲಿ ನಡೆಸಿದ್ದ ಸ್ವಾಬ್ ಟೆಸ್ಟ್ ವೇಳೆ 10 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ನಾಗತಿ ಬೆಳಗಲು ಗ್ರಾಪಂ ಅಧ್ಯಕ್ಷ ರುದ್ರೇಶ್ ನೇತೃತ್ವದಲ್ಲಿ ಗ್ರಾಪಂ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿದರು. ಈ ವೇಳೆ ಭದ್ರಾವತಿ ತಹಶೀಲ್ದಾರ್ ಸಂತೋಷ್‌ಕುಮಾರ್, ಟಿಎಚ್‌ಒ ಡಾ. ಅಶೋಕ್, ಅರಬಿಳಚಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಅರಬಿಳಚಿ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹೊಸಳ್ಳಿ ಗ್ರಾಮದ ಕಂಟೈನ್ಮೆಂಟ್ ವಲಯಗಳಿಗೆ ತೆರಳಿ ಐಎಲ್‌ಐ ಸಮೀಕ್ಷೆ ಕೂಡ ಮಾಡಿದರು.