ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಸಾಮಾಜಿಕ ಸೇವೆ ಮಾಡಲು ಉತ್ತಮ ವೇದಿಕೆ ಹಾಗೂ ಉತ್ತಮ ಸಹಕಾರ ನೀಡಲು ರೋಟರಿ ಸೆಂಟ್ರಲ್‌ನಿಂದ ಮಾತ್ರ ಸಾಧ್ಯ ಎಂದು ಹೊಸಕೋಟೆ ರೋಟರಿ ಸೆಂಟ್ರಲ್ ನೂತನ ಅಧ್ಯಕ್ಷ ವೆಂಕಟೇಶ್ ತಿಳಿಸಿದರು.
ನಗರದ ವೆಂಕಟಾದ್ರಿ ಸಭಾಂಗಣದಲ್ಲಿ ನಿರ್ಗಮಿತ ಅಧ್ಯಕ್ಷ ಲಕ್ಷಣ್ ಗೌಡ ಜಿಲ್ಲಾ ಪ್ರಾಂತಪಾಲ ಸಮ್ಮುಖದಲ್ಲಿ ಅಧಿಕಾರ ಹಸ್ಥಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
10 ವರ್ಷಗಳಿಂದ ರೋಟರಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದು, ನನಗೆ ತಂಡದ ಎಲ್ಲ ಸದಸ್ಯರು ಸಹಕಾರ ನೀಡಿ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡಿ ಎಂದರು. ನಿರ್ಗಮಿತ ಅಧ್ಯಕ್ಷ ನನ್ನ ಒಂದು ವರ್ಷದ ಅವಧಿಯಲ್ಲಿ 30 ಸಾವಿರ ಸಸಿಗಳನ್ನು ನೆಡಲಾಯಿತು. ಎರಡು ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ, ಉಚಿತ ಚಿಕಿತ್ಸೆ, ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ದೇಣಿಗೆ, ಕಂಪ್ಯೂಟರ್ ಟೇಬಲ್ ವಿತರಣೆ, ಬಡವರಿಗೆ 500 ಕಂಬಳಿ ವಿತರಣೆ, ಒಂದು ಸಾವಿರ ಹೆಲ್ಮೆಟ್ ವಿತರಣೆ, ಬಡ ರೋಗಿಗಳಿಗೆ 30 ಲಕ್ಷ ರೂ.ವೆಚ್ಚದ ಡಯಾಲಿಸಿಸ್ ಯಂತ್ರ ಕೊಡುಗೆ, 130 ಪೌರ ಕಾರ್ಮಿಕರಿಗೆ ರೈನ್‌ಕೋಟ್ ಹಾಗೂ ಕೈ ಕವಚ ವಿತರಣೆ, ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ನೂತನ ಅಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಪ್ರಾಂತಪಾಲ ಸತೀಶ್ ಮಾಧವನ್ ಮಾತನಾಡಿ, ರೋಟರಿ ಸಂಸ್ಥೆಗೆ ನೂತನ ಸದಸ್ಯರ ಆಗಮನ ಸಂತಸ ತಂದಿದ್ದು, ಅದರಲ್ಲೂ ಯುವಕರು ಹೆಚ್ಚಾಗಿದ್ದು, ಸಮಾಜ ಸೇವೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಸಮಾಜ ಸೇವೆ ಮಾಡುವ ಮನೋಭಾವ ಕೆಲ ಸಂದರ್ಭದಲ್ಲಿ ಮೂಡುತ್ತದೆ. ಆದರೆ, ಅವರಿಗೆ ಸೂಕ್ತ ವೇದಿಕೆ ದೊರೆಯದೆ, ಸೇವೆ ಮಾಡುವುದರಿಂದ ವಂಚಿತರಾಗುತ್ತಾರೆ. ಆದರೆ, ಹೊಸಕೋಟೆ ರೋಟರಿ ಸೆಂಟ್ರಲ್‌ನಲ್ಲಿ ಸೇವಾ ಮನೋಭಾವದವರನ್ನು ಒಟ್ಟಿಗೆ ಸೇರಿಸಿ, ಅವರಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಸಹಕಾರ ನೀಡುತ್ತಿರುವುದು ಪ್ರಶಂಸನೀಯ ಎಂದರು.
ನಿರ್ಗಮಿತ ಅಧ್ಯಕ್ಷ ಲಕ್ಷಣ್ ಗೌಡ, ನೂತನ ಅಧ್ಯಕ್ಷ ವೆಂಕಟೇಶ್ ಅವರಿಗೆ ಹಾಗೂ ನಿರ್ಗಮಿತ ಕಾರ್ಯದರ್ಶಿ ಸುರೇಶ್ ನೂತನ ಕಾರ್ಯದರ್ಶಿ ಸೋಮಣ್ಣರಿಗೆ ಅಧಿಕಾರ ಹಸ್ಥಾಂತರ ಮಾಡಿದರು.
ಜೋನಕ್ ಪ್ರಾಂತಪಾಲ ರಾಮಚಂದ್ರಪ್ಪ, ವಿಭಾಗೀಯ ಪ್ರಾಂತಪಾಲ ಸುಧಾಕರ್, ಸಹಾಯಕ ಪ್ರಾಂತಪಾಲ ವೆಂಕಟರಮಣಪ್ಪ, ಡಿ.ಎಸ್.ರಾಜ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಗುರುನಾಗೇಶ್, ಮಾಜಿ ಅಧ್ಯಕ್ಷ ಡಾ.ನಾಗರಾಜ್, ಬಚ್ಚಣ್ಣ, ಲಕ್ಷ್ಮಣ್ ಗೌಡ, ನಿರ್ದೇಶಕರಾದ ಆರ್.ಟಿ.ಸಿ.ಗೋವಿಂದ್ ರಾಜ್, ಸುರೇಶ್ ಮೊದಲಾದವರು ಹಾಜರಿದ್ದರು.