ಜಿಲ್ಲೆ

ಹೊಸಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ

ಶಿವರಾಜ.ಎಂ

ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಬಂಧನ

ಕೋಟ್ಯಂತರ ರೂ.ಮೌಲ್ಯದ ಕಳವು ಮಾಲು ಜಪ್ತಿ


ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ವಿವಿಧ ಅಪರಾಧ ಪ್ರಕರಣಗಳ ಬೆನ್ನತ್ತಿದ್ದ ಹೊಸಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಕೋಟ್ಯಂತರ ರೂ.ಮೌಲ್ಯದ ವಾಹನಗಳು ಹಾಗೂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
11 ಟ್ರ್ಯಾಕ್ಟರ್ ಹಾಗೂ ಟ್ರಾಲಿ ವಶ: ನಗರದ ಕೆಇಬಿ ವೃತ್ತದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಹಾಗೂ ಟ್ರಾಲಿ ಕದ್ದು ಅವುಗಳ ಸ್ವರೂಪ ಬದಲಿಸಿ ಮಾರಾಟ ಮಾಡಿದ್ದ ಕೋಲಾರದ ಶಿವಾನಂದ್(28) ಹಾಗೂ ಆನಂದ್ (30) ಎಂಬುವರನ್ನು ಬಂಧಿಸಿ, 11 ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳನ್ನು ಜಪ್ತಿ ಮಾಡಲಾಗಿದೆ. ಹೊಸಕೋಟೆ, ಸಾತನೂರು, ಮುಳಬಾಗಿಲು, ನಂದಿ, ಚಿಂತಾಮಣಿ, ಆಂಧ್ರ ಪ್ರದೇಶದ ವಿಕೋಟಾ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಭೇದಿಸಲಾಗಿದೆ.

ಮಾದಕ ವಸ್ತುಗಳ ವಶ: ನೈಜೀರಿಯನ್ ಪ್ರಜೆಗಳ ಜತೆ ಸೇರಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಹೊಸಕೋಟೆಯ ಸುಹೇಲ್ ಅಹಮದ್ (30) ಎಂಬುವನನ್ನು ಬಂಧಿಸಿ, 80 ಗ್ರಾಂ ಎಂಡಿಎಂಎ ಕ್ರಿಸ್ಟಲ್, 2 ಕೆ.ಜಿ ಗಾಂಜಾ, 3 ಕೆಟಿಎಂ ಬೈಕ್ ಹಾಗೂ 1 ಟಿವಿಎಸ್ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮಾದಕ ವಸ್ತು ಖರೀದಿಗೆ ಬರುತ್ತಿದ್ದವರನ್ನು ಮಾರಕಾಸಗಳಿಂದ ಬೆದರಿಸಿ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ಯಾಸ್ ರಿಪಿಲ್ಲಿಂಗ್ ದಂಧೆಕೋರರ ಬಂಧನ: ಕುರುಬರಹಳ್ಳಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಸರ್ಕಾರಿ ಖಾಸಗಿ ಗ್ಯಾಸ್ ಸಿಲಿಂಡರ್‌ಗಳಿಗೆ ರೀಫಿಲ್ಲಿಂಗ್ ಮಾಡುತ್ತಿದ್ದ ಬಿಹಾರ ಮೂಲದ ವಿಕ್ರಮ್(25) ಹಾಗೂ ಬೆಂಗಳೂರಿನ ಅಜರ್ ಪಾಷಾ (27)ಎಂಬುವರನ್ನು ಬಂಧಿಸಿ 8 ಲಕ್ಷ ರೂ.ಮೌಲ್ಯದ 462 ಗ್ಯಾಸ್ ಸಿಲಿಂಡರ್, 2 ವಿದ್ಯುತ್ ಚಾಲಿತ ಮೋಟಾರ್ ಪಂಪ್ ಹಾಗೂ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಮನೆಗಳ್ಳ ಅಂದರ್: ಬೀಗ ಹಾಕಿರುವ ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪದ ಮೇಲೆ ಕೋಲಾರದ ಪ್ರದೀಪ್ (32)ಎಂಬುವನನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಹೊಸಕೋಟೆ ಉಪ ವಿಭಾಗದ ಡಿವೈಎಸ್‌ಪಿ ಶಂಕರೇಗೌಡ ಅಣ್ಣಪ್ಪ ಸಾಹೇಬ್ ಪಾಟೀಲ್ ಮಾರ್ಗದರ್ಶನದಲ್ಲಿ ಹೊಸಕೋಟೆ ಆರಕ್ಷಕ ನಿರೀಕ್ಷಕ ಬಿ.ಎಸ್.ಅಶೋಕ್, ಸಿಬ್ಬಂದಿ ನಾಗರಾಜ್, ರಮೇಶ್, ಪ್ರಕಾಶ್ ಬಾಬು, ದತ್ತಾತ್ರೇಯ, ರಮೇಶ್, ಜೆರಾಲ್ಡ್, ಗೋಪಾಲ್ ಕೃಷ್ಣ ಮತಿವಣ್ಣನಾರಾಯಣ್, ರಮೇಶ್ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.