ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮುಂದಿನ ಲೋಕಸಭಾ ಚುನಾವಣೆ ಹಾಗೂ ಮುಂದಿನ ದಿನಗಳಲ್ಲಿ ಎದುರಾಗುವ ಸ್ಥಳೀಯ ಚುನಾವಣೆ ಗೆಲುವಿಗೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಪಕ್ಷ ಸಂಘಟನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಮತ್ತು ಚೊಕ್ಕಹಳ್ಳಿ ಪಂಚಾಯಿತಿಗಳಿಗೆ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಇತ್ತೀಚೆಗೆ ಸನ್ಮಾನಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಆದರೂ ಇವೆರಡು ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಎನ್ನಬಹುದು ಎಂದರು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದೀರಿ. ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರ ಇರುವಾಗ ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ಸಂಘಟನೆಯಲ್ಲಿ ರಾಜಕೀಯ ಬೇಡ:
ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಘಟನೆ ವಿಷಯದಲ್ಲಿ ಯಾವುದೇ ರಾಜಕೀಯ ತರಬಾರದು, ಎಲ್ಲರೂ ಒಗ್ಗೂಡಿ ಸಂಘಟನೆಗೆ ಮುಂದಾಗಬೇಕು ಎಂದ ಎಂಟಿಬಿ, ಯಾವುದಾದರೂ ಅಸಮಾಧಾನ, ಗೊಂದಲಗಳಿದ್ದರೆ ಕುಳಿತು ಬಗೆಹರಿಸಿಕೊಳ್ಳಬೇಕು, ಮುಂದಿನ ಚುನಾವಣೆಗಳಿಗೆ ತಾಲೂಕಿನಲ್ಲಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಹೇಳಿದರು.
ಬಿಜೆಪಿ ತತ್ವಸಿದ್ಧಾಂತ: ಬಿಜೆಪಿ ಬೆಂಬಲಿತರು ಪಕ್ಷ ಸಿದ್ಧಾಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಚೊಕ್ಕಹಳ್ಳಿ ಹಾಗೂ ದೊಡ್ಡಹುಲ್ಲೂರು ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರಿಗೆ ಅಧಿಕಾರ ಸಿಗಲು ಕಾರಣವಾಗಿದೆ ಎಂದು ಬಮುಲ್ ನಿರ್ದೇಶಕ ಹುಲ್ಲೂರು ಮಂಜುನಾಥ್ ಹೇಳಿದರು.
ಚುನಾವಣೆ ವೇಳೆಯಲ್ಲಷ್ಟೇ ರಾಜಕೀಯ ಸೀಮಿತವಾಗಬೇಕು, ನಂತರದಲ್ಲಿ ಪಕ್ಷಭೇದ ಮರೆತು ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಸಮನ್ವಯದಿಂದ ಅಭಿವೃದ್ಧಿ ಕೆಲಸಗಳಿಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.