ಜಿಲ್ಲೆ

ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಕಲಿಕೆ ಅನಿವಾರ್ಯ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಸರ್ಕಾರಿ ಶಾಲಾ ಮಕ್ಕಳ ಕಲಿಕೆಗೆ ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡಲಾಗುತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್ ಹೇಳಿದರು.
ನಗರದ ಮಾದರಿ ಶಾಲೆಯಾದ ಜಿಕೆಬಿಎಂಎಸ್ ಶಾಲೆಯಲ್ಲಿ ನೂತನವಾಗಿ ಎಲ್‌ಕೆಜಿ ತರಗತಿಗೆ ಚಾಲನೆ ನೀಡಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆ ಮುಖ್ಯವಾಗಿದ್ದು, ಸರ್ಕಾರ ಆಂಗ್ಲ ಮಾಧ್ಯಮದಲ್ಲಿ ಸರ್ಕಾರಿ ಶಾಲೆಗಳನ್ನು ತೆರೆಯಲು ಆರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಬಂದ ನಂತರ ಈಗ ಎಲ್‌ಕೆಜಿ ತರಗತಿಗೆ ಚಾಲನೆ ನೀಡಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳಿಗೆ ಮಾತೃಭಾಷೆಯೊಂದಿಗೆ ಆಂಗ್ಲ ಭಾಷೆ ಕಲಿಕೆಗೂ ಒತ್ತು ನೀಡಬೇಕು ಎಂದರು.
ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ, ಸರ್ಕಾರ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ, ಶೂ, ಸಮವಸ್ತ್ರ, ಬೆಳಗ್ಗೆ ಹಾಲು, ಮೊಟ್ಟೆ, ಮಧ್ಯಾಹ್ನದ ಬಿಸಿಊಟ, ಆಂಗ್ಲ ಮಾಧ್ಯಮ ಹೀಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಆಂಗ್ಲ ಮಾಧ್ಯಮದಲ್ಲಿ ಕಲಿಯಬೇಕಾದರೆ ಈ ಮೊದಲು ಸಾವಿರಾರು, ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿ ಕಲಿಸಬೇಕಿತ್ತು. ಆದರೆ ಈಗಿನ ಸರ್ಕಾರ ಮಕ್ಕಳಿಗೆ ಮೊಟ್ಟೆ ಹಾಲಿನಿಂದ ಹಿಡಿದು ಎಲ್ಲ ಸೌಲಭ್ಯ ನೀಡುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಡಿ.ಎಸ್.ರಾಜ್‌ಕುಮಾರ್, ನಗರಸಭೆ ಸದಸ್ಯೆ ಗಾಯತ್ರಿ ವಿಜಯ್‌ಕುಮಾರ್, ಸಿಆರ್‌ಪಿ ತ್ಯಾಗರಾಜ್ ಇತರರಿದ್ದರು.