ಜಿಲ್ಲೆ

ಉದ್ಯೋಗ ಸೃಷ್ಟಿಗೆ ಸರ್ಕಾರದ ದಿಟ್ಟ ಹೆಜ್ಜೆ

ಶಿವರಾಜ.ಎಂ

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿಕೆ

ಹೊಸಕೋಟೆಯಲ್ಲಿ ಸಂಶೋಧನಾ ಕೇಂದ್ರ ಉದ್ಘಾಟನೆ


ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಸರ್ಕಾರ, ರಾಜ್ಯಾದ್ಯಂತ ಪದವಿ ಕಾಲೇಜುಗಳಲ್ಲಿ ಅವಶ್ಯಕತೆಗೆ ತಕ್ಕಂತೆ ವಿವಿಧ ಕೋರ್ಸ್‌ಗಳ ಸೀಟುಗಳನ್ನು ಹೆಚ್ಚಿಸುವ ಮೂಲಕ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡುವ ಕೆಲಸ ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 3.68 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಸ್ನಾತಕ - ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಖಾಸಗಿ ಕಾಲೇಜುಗಳಲ್ಲಿ ಬಹಳಷ್ಟು ಕೋರ್ಸ್‌ಗಳಿಗೆ ಸೀಟು ಲಭ್ಯವಿದೆ. ಆದರೆ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಅಷ್ಟೊಂದು ಪ್ರವೇಶ ಶುಲ್ಕ ನೀಡಿ ವಿದ್ಯಾಭ್ಯಾಸ ಮಾಡಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಾಲೇಜುಗಳಲ್ಲೇ ವಿವಿಧ ಕೋರ್ಸ್‌ಗಳನ್ನು ಶುರುಮಾಡಿ ಅದಕ್ಕೆ ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.
ಸರ್ಕಾರಿ ಕಾಲೇಜುಗಳಲ್ಲಿ ಕೋರ್ಸ್‌ಗಳ ಹೆಚ್ಚಳ ಮಾಡಿದರೆ 700 ರಿಂದ 800 ಅತಿಥಿ ಉಪನ್ಯಾಸಕರಿಗೆ ಉದ್ಯೋಗಾವಕಾಶ ಸಿಗಲಿದೆ. ಗ್ರಾಮೀಣ ಭಾಗದ ಶೋಷಿತ ವರ್ಗದ ಮಕ್ಕಳಿಗೆ ದಾರಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಪ್ರಯತ್ನದಿಂದ ಗುರಿಮುಟ್ಟಲು ಸಾಧ್ಯ:
ವಿದ್ಯಾರ್ಥಿ ಜೀವನದಲ್ಲಿ ಎಲ್ಲರೂ ಗುರಿ ಇಟ್ಟುಕೊಂಡು ಆ ಗುರಿ ಸಾಧನೆ ಮಾಡಲು ಪ್ರತಿನಿತ್ಯ ಶ್ರಮಿಸಿದರೆ ಮಾತ್ರ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಶರತ್ ಬಚ್ಚೇಗೌಡ ಕಿವಿಮಾತು ಹೇಳಿದರು. ಪ್ರಶ್ನೆ ಪತ್ರಿಕೆ ನೋಡುತ್ತಿದ್ದಂತೆ ನೀವು ನಿರೀಕ್ಷಿಸಿದಷ್ಟು ಅಂಕ ಸಿಗುವ ವಿಶ್ವಾಸ ಮೂಡಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಶ್ರಮ ಹಾಕಿ ಓದಿನ ಕಡೆ ಗಮನ ನೀಡಬೇಕು ಎಂದು ಹೇಳಿದರು.
ಈ ವರ್ಷ ನೂರಕ್ಕೆ ನೂರು ಅಂಕ ಪಡೆದ 10 ರಿಂದ 12 ವಿದ್ಯಾರ್ಥಿಗಳಿಗೆ ಮಾತ್ರ ಈ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿದ್ದೇವೆ, ಮುಂದಿನ ವರ್ಷ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಬೇಕು ಎಂಬು ಆಶಿಸುತ್ತೇನೆ ಎಂದರು.