ಜಿಲ್ಲೆ

ರೈತ ಮಹಿಳೆ ಕೈ ಹಿಡಿದ ಬಟನ್‌ರೋಸ್

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಎಂದರೆ ಮಳೆಯೊಂದಿಗಿನ ಗುದ್ದಾಟವೇ ಸರಿ ಎಂಬ ಹತಾಶೆ, ಹಾಕಿದ ಬಂಡವಾಳವೂ ವಾಪಸ್ ಬರುವುದೇ ಅನುಮಾನ ಎಂಬ ಸಂದಿಗ್ಧ ಪರಿಸ್ಥಿತಿ ಸಾಮಾನ್ಯ. ಆದರೆ ಇದೆಲ್ಲ ಸಂಕಷ್ಟ ಮೆಟ್ಟಿನಿಂತ ರೈತ ಮಹಿಳೆಯೊಬ್ಬರು ಬಟನ್‌ರೋಸ್ ಬೆಳೆದು ಮಾದರಿ ಎನಿಸಿದ್ದಾರೆ.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿ ಕಾಮರಸನಹಳ್ಳಿ ಮಹಿಳೆ ಮುನಿಯಮ್ಮ ನರೇಗಾ ಯೋಜನೆಯಡಿ ಬಟನ್ ರೋಸ್ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ನದಿ ಮೂಲವಿಲ್ಲದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಲ್ಲಿ ಯಶ ಕಾಣುವುದು ಎಂದರೆ ಅದು ಸಾಮಾನ್ಯ ಮಾತಲ್ಲ. ಆದರೆ ಈ ಪ್ರದೇಶಕ್ಕೆ ಅನುಗುಣವಾದ ಬೆಳೆ ಬೆಳೆಯಲು ಯೋಗ್ಯ ಮಣ್ಣು ಮತ್ತು ಹವಾಮಾನವಿರುವುದು ಕೊಂಚ ಸಮಾಧಾನಕಾರ ವಿಷಯ. ಮುಖ್ಯವಾಗಿ ಮಾವು, ಸಪೋಟ, ನೇರಳೆ ಮುಂತಾದ ಬೆಳೆಗೆ ಅನುಕೂಲಕರವಾಗಿದೆ. ಇದೇ ವಾತಾವರಣವಿರುವ ಕಾಮರಸನಹಳ್ಳಿಯಲ್ಲಿ ರೈತ ಮಹಿಳೆ ಮುನಿಯಮ್ಮ ತೋಟಗಾರಿಕೆ ಇಲಾಖೆ ನೆರವು ಪಡೆದು ಜಮೀನಿನಲ್ಲಿರುವ ಕೊಳವೆ ಬಾವಿಯಲ್ಲಿ ಲಭ್ಯವಿದ್ದ ನೀರಿನಲ್ಲಿ ಹನಿ ನೀರಾವರಿ ಅಳವಡಿಸಿಕೊಂಡು ಹೂವಿನ ಕೃಷಿ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಕೈ ಹಿಡಿದ ನರೇಗಾ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 1 ಎಕರೆ ಪ್ರದೇಶದಲ್ಲಿ ಗಿಡ ನೆಡಲು, ಕೊಟ್ಟಿಗೆ ಗೊಬ್ಬರ ಮತ್ತು ಇತರ ಬೇಸಾಯಕ್ಕೆ 105000 ರೂ.ಸಹಾಯಧನ ಪಡೆಯುವ ಮೂಲಕ ಆದಾಯ ಕಂಡುಕೊಂಡಿದ್ದಾರೆ.

ತಿಂಗಳಿಗೆ 30 ಸಾವಿರ ರೂ. ಆದಾಯ: ಈ ಮೊದಲು ರಾಗಿ ಬೆಳೆಯಲಾಗುತ್ತಿತ್ತು. ಇದು ಕುಟುಂಬ ನಿರ್ವಹಣೆಗೂ ಕಷ್ಟವಾಗಿತ್ತು. ಈಗ ಬಟನ್ ರೋಸ್ ಬೆಳೆದಿದ್ದರಿಂದ ಪ್ರತಿ ದಿನ ಕನಿಷ್ಠ 1 ಸಾವಿರ ರೂ. ಆದಾಯದಂತೆ ತಿಂಗಳಿಗೆ 30 ಸಾವಿರ ರೂ.ಗಳಿಸುತ್ತಿದ್ದೇನೆ ಎನ್ನುತ್ತಾರೆ ಮುನಿಯಮ್ಮ. ತಮಿಳುನಾಡಿನಿಂದ ಸಸಿ ತರಿಸಿ ನಾಟಿ ಮಾಡಲಾಗಿತ್ತು. ಸಾಲಿನಿಂದ ಸಾಲಿಗೆ 5 ಅಡಿ ಅಂತರ ಹಾಗೂ ಗಿಡದಿಂದ ಗಿಡಕ್ಕೆ 2 ಅಡಿ ಅಂತರ ಇಟ್ಟುಕೊಂಡು ನಾಟಿ ಮಾಡಲಾಗಿದೆ. ಎರೆಹುಳು ಹಾಗೂ ಕೊಟ್ಟಿಗೆ ಗೊಬ್ಬರ ನೀಡಲಾಗಿದೆ. ಎಲೆಚುಕ್ಕೆ ರೋಗ ಬಂದಾಗ ಬೇವಿನ ಎಣ್ಣೆ ಸಿಂಪಡಣೆ ಮಾಡಲಾಗುತ್ತದೆ. ಜೀವಾಮೃತ ಸಹ ನೀಡಲಾಗುತ್ತಿದೆ. ಸಸಿ ನಾಟಿ ಮಾಡಿದ ಎರಡೇ ತಿಂಗಳಲ್ಲಿ ಹೂವು ಬಿಡಲು ಪ್ರಾರಂಭಿಸಿದ್ದು, ಉತ್ತಮ ಇಳುವರಿ ಸಿಗುತ್ತಿದೆ ಎನ್ನುತ್ತಾರೆ.

ಸಹಾಯಧನದ : ನರೇಗಾ ಯೋಜನೆಯಡಿ ಹೂವು, ಹಣ್ಣು, ತರಕಾರಿ ಬೆಳೆಯಲು ಗ್ರಾಪಂ ಮತ್ತು ತೋಟಗಾರಿಕೆ ಇಲಾಖೆ ಸಹಾಯಧನ ನೀಡುತ್ತದೆ ಎಂಬುದನ್ನರಿತ ರೈತರು ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಈ ಯೋಜನೆಯ ಲಾಭ ಪಡೆದು ಸಾವಯವ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸ್ಥಳೀಯರಿಗೆ ಕುಶಲ ಉದ್ಯೋಗ ಲಭಿಸಲಿದ್ದು ತಲಾದಾಯ ಹೆಚ್ಚುವುದರಿಂದ ಗ್ರಾಮೀಣ ಜನರ ಬದುಕು ಹಸನಾಗುವ ಆಶಯ ವ್ಯಕ್ತವಾಗಿದೆ.


ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳಿಂದ ಗ್ರಾಮೀಣ ರೈತರಿಗೆ ಹಾಗೂ ಆದ್ಯತಾ ಕುಟುಂಬಗಳಿಗೆ ಹೆಚ್ಚು ಉಪಯುಕ್ತವಾಗುತ್ತಿದೆ. ಈ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ.
ಟಿ.ಕೆ.ರಮೇಶ್, ಜಿಪಂ ಉಪಕಾರ್ಯದರ್ಶಿ ಬೆಂ.ಗ್ರಾಮಾಂತರ

ಪುಷ್ಪಕೃಷಿಯಿಂದ ಈ ಭಾಗದ ರೈತರಿಗೆ ಕುಟುಂಬದ ಆದಾಯ ಉತ್ತಮವಾಗಲಿದ್ದು ಇವರ ಜಮೀನುಗಳಲ್ಲಿ ಕೆಲಸ ಮಾಡುವ ಕೂಲಿಕಾರರ ತಲಾ ಆದಾಯ ಹೆಚ್ಚಾಗಲಿದೆ. ರೈತರಿಗೆ ನರೇಗಾ ಆಸರೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಉತ್ತೇಜನದಾಯಕವಾಗಿದೆ.
ರೇವಣಸಿದ್ದಪ್ಪ, ನರೇಗಾ ಜಿಲ್ಲಾ ಸಂಯೋಜಕ ಅಧಿಕಾರಿ