ಜಿಲ್ಲೆ

ಬೀದಿನಾಯಿಗಳ ದಾಳಿಗೆ 35 ಕುರಿ ಬಲಿ

ಶಿವರಾಜ.ಎಂ

ದೇವನಗುಂದಿ ಗ್ರಾಮದಲ್ಲಿ ಪ್ರಕರಣ

ನಾಯಿಗಳ ನಿಯಂತ್ರಣಕ್ಕೆ ತಾಪಂ ಕ್ರಮದ ಭರವಸೆ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಾಲೂಕಿನ ದೇವನಗೊಂದಿ ಗ್ರಾಮದಲ್ಲಿ ಮಂಗಳವಾರ ಕುರಿದೊಡ್ಡಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು 35 ಕುರಿಗಳು ಬಲಿಯಾಗಿವೆ.
ಗ್ರಾಮದ ರಾಮಣ್ಣ ಎಂಬುವರು ಸೋಮವಾರ ಸಂಜೆ ಕುರಿಗಳನ್ನು ಮನೆ ಸಮೀಪದ ದೊಡ್ಡಿಗೆ ಬಿಟ್ಟಿದ್ದರು. ಮಂಗಳವಾರ ಬೆಳಗ್ಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಆಗಾಗ ಕುರಿ ಮೇಕೆಗಳ ಮೇಲೆ ನಾಯಿಗಳು ದಾಳಿ ನಡೆಸುವುದು ಸಾಮಾನ್ಯವಾಗಿದ್ದರೂ ಏಕಕಾಲದಲ್ಲಿ ದಾಳಿ ನಡೆಸಿರುವುದು ಇದೇ ಮೊದಲು ಎಂದು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ.
ಕಣ್ಣೀರಿನಲ್ಲಿ ರಾಮಣ್ಣ ಕುಟುಂಬ:
ರಾಮಣ್ಣ ಕುಟುಂಬ ಜೀವನೋಪಾಯಕ್ಕೆ ಕುರಿ ಸಾಕಣೆಯನ್ನೇ ಅವಲಂಬಿಸಿದ್ದರು. ದುರ್ಘಟನೆಯಿಂದ ಕುಟುಂಬ ಕಂಗಾಲಾಗಿದೆ. ಅಷ್ಟೂ ಕುರಿಗಳನ್ನು ಕೊಂದಿರುವ ಬೀದಿನಾಯಿಗಳ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದು, ಸಾರ್ವಜನಿಕರ ಮೇಲೆ ದಾಳಿ ನಡೆಸಿದರೆ ಗತಿ ಏನು ಎಂದು ಭಯಗೊಂಡಿದ್ದಾರೆ. .
ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ಗ್ರಾಪಂ ಕ್ರಮಕ್ಕೆ ಮುಂದಾಗಿಲ್ಲ. ಸಂತಾನಶಕ್ತಿ ಹರಣ ಚಿಕಿತ್ಸೆಯಂತಹ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ. ಈ ಘಟನೆಗೆ ಗ್ರಾಪಂ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬೀದಿ ನಾಯಿಗಳ ದಾಳಿಯಿಂದ ಕುರಿಗಳು ಬಲಿಯಾಗಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ತನಿಖೆ ನಡೆಸಿ ವರದಿ ಪಡೆಯಲಾಗುವುದು. ಕುರಿಗಾಹಿ ಸುರಕ್ಷಾ ಯೋಜನೆಯಡಿ ನೀಡುತ್ತಿರುವ ಪರಿಹಾರ ಧನವನ್ನು ಸಂಬಂಧಪಟ್ಟವರಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಸಿ.ಎನ್.ನಾರಾಯಣಸ್ವಾಮಿ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ

ಬೀದಿ ನಾಯಿಗಳ ನಿಯಂತ್ರಣಕ್ಕೆ ಕಳೆದ ವಾರವಷ್ಟೇ ಸಭೆ ಕರೆದು 2023-24 ಸಾಲಿಗೆ ಹಣ ಹಂಚಿಕೆ ಮಾಡಿ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ. ಪಶುಸಂಗೋಪನೆ ಇಲಾಖೆ ಸಹಕಾರದೊಂದಿಗೆ ಬೀದಿ ನಾಯಿಗಳ ನಿಯಂತ್ರಣ ಹಾಗೂ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಪ್ರಕರಣ ಮರುಕಳಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು.
ಚಂದ್ರಶೇಖರ್ ತಾಪಂ ಇಒ