ಮದ್ದೂರು : ತಾಲೂಕಿನ ಕೊಪ್ಪ ಹೋಬಳಿಯ ಹೊಸಕೆರೆ ಗ್ರಾಮದಲ್ಲಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಪ್ರಸಕ್ತ ವರ್ಷ 27 ಲಕ್ಷ ರೂ. ಲಾಭ ಗಳಿಸುವ ಮೂಲಕ ಉತ್ತಮವಾಗಿ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಎಚ್.ಎನ್.ಪ್ರಸನ್ನಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಎಲ್ಲ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಸಂಘವು ಲಾಭ ಗಳಿಸಲು ಸಾಧ್ಯವಾಯಿತು ಎಂದು ಹರ್ಷವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡಲು ಚಿಂತನೆ ನಡೆಸಿದ್ದು ಶೀಘ್ರವೇ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಅಧಿಕಾರಿಗಳಿಗೆ, ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಇದರಿಂದ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘದಲ್ಲಿ ರಾಸಾಯನಿಕ ಗೊಬ್ಬರ ಮಾರಾಟ ಮಾಡುವಂತೆ ರೈತರು ಹಲವಾರು ಬಾರಿ ಮನವಿ ನೀಡಿದ್ದಾರೆ. ಸಂಘದಲ್ಲಿ ರಾಸಾಯನಿಕ ಗೊಬ್ಬರ ನೀಡದ ಪರಿಣಾಮ ಬೇರೆ ಗ್ರಾಮಗಳಿಗೆ ಹೋಗಿ ಗೊಬ್ಬರ ತರುವುದು ಸಮಸ್ಯೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಶೀಘ್ರವಾಗಿ ಸಂಘದಲ್ಲೇ ರಾಸಾಯನಿಕ ಗೊಬ್ಬರ ಮಾರಾಟ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಸಂಘದಲ್ಲಿ 1 ಸಾವಿರ ರೂ. ಪಾವತಿಸಿ ಸಂಘದ ಷೇರುದಾರರಾಗುವ ಜತೆಗೆ ನವೀಕರಣ ಮಾಡಿಕೊಳ್ಳಬೇಕು. ಇದರಿಂದ ಮುಂದಿನ ಚುನಾವಣೆಗೆ ಸಂಘದಲ್ಲಿ ಮತದಾನದ ಹಕ್ಕನ್ನು ಪಡೆಯಬಹುದಾಗಿದೆ. ಜತೆಗೆ ಸಂಘದಲ್ಲಿ ಎಸ್‌ಬಿ ಖಾತೆ ತೆರೆದರೆ ಬ್ಯಾಂಕಿನಲ್ಲಿ ಮಾಡಬಹುದಾದ ವ್ಯವಹಾರವನ್ನು ಸಂಘದಲ್ಲಿ ಮಾಡಬಹುದು ಎಂದರು.
ಸಂಘದಲ್ಲಿ 1439 ಷೇರುದಾರರು ಇದ್ದು, 5.22 ಕೋಟಿ ರೂ. ಸಾಲ ನೀಡಲಾಗಿದೆ. ಕಾಲ ಕಾಲಕ್ಕೆ ಸಾಲ ವಸೂಲಾತಿ ಮಾಡಲಾಗುತ್ತಿದೆ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಲಾಗುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷೆ ಎಚ್.ಎಲ್. ಪ್ರಭಾವತಿ, ನಿರ್ದೇಶಕರಾದ ಎಚ್.ಎಲ್.ದಯಾನಂದ, ಎಚ್.ಎಲ್.ರಾಮಕೃಷ್ಣ, ಎಚ್.ಪಿ.ವಿಜೇಂದ್ರ, ಎಚ್.ಆರ್.ಪುಟ್ಟಸ್ವಾಮಿ, ಎಚ್.ಸಿ.ಪುಟ್ಟಸ್ವಾಮಿ, ಸಿ.ಪುಟ್ಟರಾಮು, ಚನ್ನಮ್ಮ, ಜಯಮ್ಮ, ವೃತ್ತ ಮೇಲ್ವಿಚಾರಕ ಎಸ್.ಬಿ.ರವೀಂದ್ರಕುಮಾರ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಚ್.ಸುಚಿತ್ರಾ ಇದ್ದರು.
-------
29ಎಂಡಿಆರ್1
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹೊಸಕೆರೆ ಗ್ರಾಮದಲ್ಲಿರುವ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಸಂಘದ ಅಧ್ಯಕ್ಷ ಎಚ್.ಎನ್.ಪ್ರಸನ್ನಕುಮಾರ್ ಉದ್ಘಾಟಿಸಿದರು. ಎಚ್.ಎಲ್.ಪ್ರಭಾವತಿ, ಎಚ್.ಎಲ್.ದಯಾನಂದ, ಎಚ್.ಎಲ್.ರಾಮಕೃಷ್ಣ, ಎಚ್.ಪಿ.ವಿಜೇಂದ್ರ, ಎಚ್.ಆರ್.ಪುಟ್ಟಸ್ವಾಮಿ, ಎಚ್.ಸಿ.ಪುಟ್ಟಸ್ವಾಮಿ ಇತರರು ಇದ್ದರು.
------------------