ಹೊಸದುರ್ಗ: ತಾಲೂಕಿನ ನಿವೃತ್ತ ಮುಖ್ಯ ಶಿಕ್ಷಕರೊಬ್ಬರು ತಮ್ಮ ದುಡಿಮೆಯ ಹಣದಲ್ಲಿ 5 ಲಕ್ಷ ರೂಯಿಯನ್ನು ಕೋವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ನಿವೃತ್ತ ಮುಖ್ಯಶಿಕ್ಷಕ ಎಂ.ಎಸ್.ಈಶ್ವರಪ್ಪ, ಸ್ವಗ್ರಾಮ ಮಲ್ಲಪ್ಪನಹಳ್ಳಿಯಲ್ಲಿ ಸಿದ್ದರಾಮೇಶ್ವರ ವಿದ್ಯಾಸಂಸ್ಥೆ ಸ್ಥಾಪಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಅಕ್ಷರ ಕಲಿವ ಆಸೆಗೆ ಆಸರೆಯಾಗಿದ್ದರು.
ಸಿದ್ದರಾಮೇಶ್ವರ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಈಶ್ವರಪ್ಪ, ಶುಕ್ರವಾರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ತಿಪ್ಪೇಸ್ವಾಮಿ ಮೂಲಕ ಕೋವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ಮೌಲ್ಯದ ಚೆಕ್‌ನ್ನು ಹಸ್ತಾಂತರಿಸಿದರು.
ಬಳಿಕ ಮಾತನಾಡಿ, ಕರೊನಾದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡ ಪರಿಸ್ಥಿತಿ ನಿಯಂತ್ರಣಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. 1 ಲಕ್ಷ ರೂ. ನೀಡುವ ಯೋಚನೆ ಮಾಡಿದ್ದ ನಾನು ಅಂತಿಮವಾಗಿ 5 ಲಕ್ಷ ರೂ. ನೀಡಿದ್ದೇನೆ. ಸಮಾಜದ ಹಿತಕ್ಕಾಗಿ ಹಣ ನೀಡಿದ್ದಕ್ಕೆ ತೃಪ್ತಿಯಿದೆ ಎಂದರು.
ಉದ್ಯಮಿ ಎಂ.ಪಿ.ರಂಗೇಶ್, ಬನಶಂಕರಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಿ.ಆರ್ ನಾಗೇಶಪ್ಪ, ಮಾಜಿ ಪುರಸಭೆ ಸದಸ್ಯ ವೃಷಭೇಂದ್ರಪ್ಪ, ಸಿದ್ದರಾಮೇಶ್ವರ ಸಂಸ್ಥೆ ಕಾರ್ಯದರ್ಶಿ ವೀರೇಂದ್ರ ಪಾಟೀಲ್ ಮತ್ತಿತರರಿದ್ದರು.