ಹೊಸದುರ್ಗ: ಪಟ್ಟಣದ ಐತಿಹಾಸಿಕ ವೀರಭದ್ರಸ್ವಾಮಿ ದೇವಸ್ಥಾನ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಶ್ರೀಸ್ವಾಮಿಯ ಕೆಂಡಾರ್ಚನೆ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಕೆಂಡಾರ್ಚನೆ ಪೂರ್ವಭಾವಿಯಾಗಿ ಸೋಮವಾರ ದೇವಾಲಯ ಆವರಣದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಲಾಯಿತು. ಶ್ರೀ ವೀರಭದ್ರ ಸ್ವಾಮಿ ಮೂಲ ಶಿಲಾಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ಸೇವೆ ಸಲ್ಲಿಸಲಾಯಿತು.
ಮಂಗಳವಾರ ಮುಂಜಾನೆ ಶ್ರೀ ಗುರು ಒಪ್ಪತ್ತಿನ ಸ್ವಾಮಿ ವಿರಕ್ತಮಠದಲ್ಲಿ ಗಂಗಾಪೂಜೆ ನೆರವೇರಿಸಿ ಗಂಗಾದೇವಿಯ ಕಳಸ, ಶ್ರೀ ಈಶ್ವರ ಸ್ವಾಮಿ, ವೀರಭದ್ರಸ್ವಾಮಿ ಆಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜಂಗಮ ಮಹೇಶ್ವರರ ಮೆರವಣಿಗೆ ನಡೆಸಲಾಯಿತು. ವೀರಗಾಸೆ, ನಂದಿ ಧ್ವಜ, ವೀರಭದ್ರ ಕುಣಿತ ಮತ್ತಿತರ ಕಲಾತಂಡಗಳು ಪಾಲ್ಗೊಂಡಿದ್ದವು. ನೂರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ದೇವಸ್ಥಾನ ಆವರಣದಲ್ಲಿ ನಿರ್ಮಿಸಲಾಗಿದ್ದ ಆಗ್ನಿಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಮುತ್ತೈದೆಯರ ಮಡಿಲಿಗೆ ಕೆಂಡ ಹಾಕುವ ಸೇವೆ ನಡೆಯಿತು. ಮೆರವಣಿಗೆ ಮೂಲಕ ಆಗಮಿಸಿದ ನಂದಿ ಧ್ವಜ, ಗಂಗಾ ಕಳಸ ಹಾಗೂ ಜಂಗಮ ಮಹೇಶ್ವರರು ಕೆಂಡ ಹಾಯ್ದು ನಂತರ ದೇವರು ಹಾಗೂ ಭಕ್ತರು ಕೆಂಡ ತುಳಿದು ಭಕ್ತಿ ಸಮರ್ಪಿಸಿದರು.
ದೇಗುಲವನ್ನು ಬಣ್ಣದ ಹೂಮಾಲೆ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕೆಂಡೋತ್ಸವದ ಬಳಿಕ ಮಹಾದಾಸೋಹ ನೆರವೇರಿತು. ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಸಂಜೆ ಶ್ರೀ ವೀರಭದ್ರಸ್ವಾಮಿ ರಾಜಬೀದಿ ಉತ್ಸವ ಜರುಗಿತು.