ಹೊಸದುರ್ಗ: ತಾಲೂಕಿನ ಮಾಡದಕೆರೆ ಹಾಗೂ ಮತ್ತೋಡು ಹೋಬಳಿಯ ವಾಣಿವಿಲಾಸ ಸಾಗರದ ಹಿನ್ನೀರು ಪ್ರದೇಶದಲ್ಲಿ ಕಾಡಾನೆ ಬೀಡು ಬಿಟ್ಟಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಸೋಮವಾರ ಸಂಜೆ ದೇವರಗುಡ್ಡ ಅರಣ್ಯ ಪ್ರದೇಶದ ಮೂಲಕ ತಾಲೂಕಿನ ಗಡಿ ದಾಟಿರುವ ಆನೆ, ಲಕ್ಕಿಹಳ್ಳಿ ಬಳಿ ಕಾಣಿಸಿಕೊಂಡಿದೆ. ಮಂಗಳವಾರ ಬೆಳಗ್ಗೆ ಹುಣಸೇಕಟ್ಟೆ-ಹೊಸೂರು ಬೋವಿಹಟ್ಟಿ ಬಳಿ ಹಿನ್ನೀರು ಪ್ರದೇಶದಲ್ಲಿ ಪ್ರತ್ಯಕ್ಷವಾಗಿದೆ. ವಿಷಯ ತಿಳಿದು ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ದಾಂಗುಡಿ ಇಟ್ಟರು. ಜನರನ್ನು ಕಂಡ ಕೂಡಲೇ ಸಮೀಪದ ಗುಡ್ಡದ ಕಡೆಗೆ ಓಡಿದೆ.
ಭದ್ರಾ ಅಭಯಾರಣ್ಯದ ಕಡೆಯಿಂದ ಬಂದಿರುವ ಅನೆ ಮಂಗಳವಾರ ರಾತ್ರಿ ಹಿರಿಯೂರು ಮಾರ್ಗವಾಗಿ ಬನ್ನೇರುಘಟ್ಟ ಅರಣ್ಯಕ್ಕೆ ತೆರಳುವ ಸಂಭವವಿದೆ. ಬುಧವಾರ ತಾಲೂಕಿನ ಅರಣ್ಯ ಪ್ರದೇಶದಲ್ಲೇ ಕಾಣಸಿಕ್ಕರೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಯೋಗೀಶ್ ತಿಳಿಸಿದ್ದಾರೆ.
ಬೈಕ್‌ಗೆ ಹಾನಿ: ಹುಣಸೆಕಟ್ಟೆ ಬಳಿ ಬೈಕ್ ತುಳಿದಿದೆ. ಕೆಲ ತೋಟಗಳಲ್ಲಿ ಬೆಳೆ ಹಾನಿ ಮಾಡಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.