ಹೊಸದುರ್ಗ: ದೇಶದಲ್ಲಿ ಭ್ರಷ್ಟಾಚಾರ, ಅನ್ಯಾಯ, ಮೋಸ, ವಂಚನೆ ಹೆಚ್ಚಾಗಿರುವುದು ಹೆಚ್ಚು ಅಂಕ ಗಳಿಸಿದ ವಿದ್ಯಾವಂತರಿಂದಲೇ ಹೊರತು ಅನಕ್ಷರಸ್ಥರಿಂದ ಅಲ್ಲ ಎಂದು ಸಾಣೇಹಳ್ಳಿಯ ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಮಂಗಳವಾರ, ತಾಲೂಕು ಕಿರಿಯ ಕಾಲೇಜು ಪ್ರಾಂಶುಪಾಲರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘ, ರಾಜ್ಯ ಸೆಕೆಂಡರಿ ಶಿಕ್ಷಕರ ಸಂಘ ಆಯೋಜಿಸಿದ್ದ 2021-22ನೇ ಸಾಲಿನ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ಅಂಕ ಗಳಿಸುವುದೇ ಸಾಧನೆಯಲ್ಲ, ಉತ್ತಮ ಸಂಸ್ಕಾರ ರೂಢಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಯಶಸ್ಸು ಗಳಿಸಬೇಕು. ಅಂಕ ಗಳಿಸಿದಂತೆ ಮಾನವೀಯ ಸಂಬಂಧಗಳಿಗೂ ಹೆಚ್ಚು ಬೆಲೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.ಹೆಚ್ಚು ಅಂಕಗಳಿಸಿ ಬದುಕಿನಲ್ಲಿ ಯಶಸ್ಸು ಗಳಿಸದಿದ್ದರೆ ಜನರು ಹುಚ್ಚರಾಗುತ್ತಾರೆ. ನಾಡಿನಲ್ಲಿ ಹೆಚ್ಚಾಗಿರುವ ಇಂತಹ ಹುಚ್ಚರಿಂದಲೇ ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ಯಾವುದೇ ವ್ಯಕ್ತಿ ಹುಟ್ಟುವಾಗಲೇ ದಡ್ಡನಾಗಿರುವುದಿಲ್ಲ. ಸತತ ಪರಿಶ್ರಮ ಹಾಗೂ ಅಧ್ಯಯನದಿಂದ ಎಲ್ಲರೂ ಉತ್ತಮ ಸಾಧನೆ ತೋರಲು ಸಾಧ್ಯ ಎಂದರು.
ಕರೋನಾ ಬಂದ ನಂತರ ಸರ್ಕಾರಿ ಆಸ್ಪತ್ರೆಗಳು ಅಭಿವೃದ್ಧಿಯಾಗಿವೆ. ಆದರೆ ಸರ್ಕಾರಿ ಶಾಲೆಗಳು ಮಾತ್ರ ಅಭಿವೃದ್ಧಿ ಕಂಡಿಲ್ಲ ಎನ್ನುವುದೇ ವಿಷಾದದ ಸಂಗತಿ. ಅಭಿವೃದ್ಧಿ ಎಂದರೆ ಕೇವಲ ಕಟ್ಟಡಗಳ ನಿರ್ಮಾಣ ಮಾಡುವುದಲ್ಲ. ಶಾಲೆಗಳಲ್ಲಿ ಗುಣಮಟ್ಟದ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು. ಸರ್ಕಾರಿ ಶಾಲೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಸಾರ್ಮಥ್ಯ ಹೊಂದಿದ್ದಾರೆ ಎಂದರು.
ವಿಧಾನ ಪರಿಷತ್ತ ಸದಸ್ಯ ಚಿದಾನಂದಗೌಡ, ಬಿಇಒ ಎಲ್.ಜಯಪ್ಪ, ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಒ.ಪ್ರಕಾಶ, ಕಾರ್ಯದರ್ಶಿ ಹರೀಶ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಟಿ.ಶೇಖರಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಆರ್.ಲಕ್ಷ್ಮಯ್ಯ, ಮಾಜಿ ಅಧ್ಯಕ್ಷ ಎಂ.ಆರ್.ಶಾಂತಪ್ಪ ಮತ್ತಿತರಿದ್ದರು.