ಜಿಲ್ಲೆ

ಮನೆ ಬಾಗಿಲಿಗೆಯೇ ಅಗತ್ಯ ವಸ್ತು

Chitradurga

ಹೊಸದುರ್ಗ: ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ 2ನೇ ದಿನವಾದ ಗುರುವಾರ ಕರೊನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಿ ಜನರು ಮನೆಯಲ್ಲೇ ಇರುವಂತೆ ನೋಡಿಕೊಂಡರು.

ತಾಲೂಕಿನಲ್ಲಿ 19 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು ಯಾರಿಗೂ ಸೋಂಕು ದೃಢಪಟ್ಟಿಲ್ಲ.

ಮನೆಯಿಂದ ಹೊರ ಬರುವವರಿಗೆ ಲಾಠಿ ರುಚಿ ತೋರಿದ ಪೊಲೀಸರು, ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿ ಜನಸ್ನೇಹಿಯಾದರು. ಬುಧವಾರ ಪಟ್ಟಣದ ವರ್ತಕರು ಹಾಗೂ ತರಕಾರಿ ಮಾರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿದರು.

ಗ್ರಾಹಕರಿಗೆ ಅಗತ್ಯವಿರುವ ಆಹಾರ, ನಿತ್ಯ ಬಳಕೆ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ಪೂರೈಕೆ ಮಾಡಲು ಸಿದ್ಧವಿರುವ ಪ್ರಾವಿಜನ್ ಸ್ಟೋರ್‌ಗಳ ವಿಳಾಸ, ಮೊಬೈಲ್ ನಂಬರ್ ಹೊಂದಿರುವವರ ಪಟ್ಟಿ ತಯಾರಿಸಿ. ಇದನ್ನು ಸಾಮಾಜಿಕ ಜಾಲತಾಣ ಹಾಗೂ ಹ್ಯಾಂಡ್‌ಬಿಲ್ ರೂಪದಲ್ಲಿ ಪ್ರತಿ ಮನೆಗೆ ತಲುಪಿಸಲಾಗಿದೆ. ಪ್ರತಿ ಅಂಗಡಿಗೆ ಎರಡು ಪಾಸ್ ನೀಡಿ ಮನೆ ಬಾಗಿಲಿಗೆ ದಿನಸಿ ದೊರೆಯುವಂತೆ ಮಾಡಿದ್ದಾರೆ.

ತರಕಾರಿ ಮಾರುವ ವ್ಯಾಪಾರಿಗಳ ಪಟ್ಟಿ ತಯಾರಿಸಿ ಪ್ರತಿ ವಾರ್ಡ್‌ಗೆ ನಿಗದಿತ ವ್ಯಾಪಾರಿಗಳನ್ನು ಗೊತ್ತುಪಡಿಸಿ ನೇರ ಮನೆ ಬಾಗಿಲಿಗೆ ಹೋಗಿಯೇ ವ್ಯಾಪಾರ ನಡೆಸಲು ಸೂಚಿಸಲಾಗಿದೆ. ಅಲ್ಲದೆ ಇವರಿಗೆ ಗುರುತಿನ ಚೀಟಿ ಸಹ ವಿತರಿಸಲಾಗಿದೆ. ಗುರುವಾರ ಬೆಳಗ್ಗೆಯಿಂದ ಹಾಲು, ತರಕಾರಿ ಹಾಗೂ ದಿನಸಿ ವಸ್ತುಗಳು ಮನೆ ಬಾಗಿಲಿನಲ್ಲಿಯೇ ದೊರೆತವು.

ಅಗತ್ಯ ವಸ್ತುಗಳನ್ನು ಪೂರೈಸಲು ಹಾಗೂ ತುರ್ತು ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡಲು ಸ್ವಯಂ ಸೇವಕರಾಗಿ ಕೆಲಸ ಮಾಡುವ ಯುವಕರಿಗೆ ಗುರುತಿನ ಚೀಟಿ ನೀಡಿ ಜನ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಸಿಪಿಐ ಫೈಜುಲ್ಲಾ, ಪಿಎಸ್‌ಐ ಶಿವಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಯ ಕ್ರಮಕ್ಕೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆ ಆರೋಪ: 2.5 ಲಕ್ಷ ಜನಸಂಖ್ಯೆ ಹೊಂದಿರುವ ತಾಲೂಕಿನ ಏಕೈಕ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಚಿಕಿತ್ಸೆಗೆ ಅಗತ್ಯ ಸೌಲಭ್ಯವಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಇಲ್ಲಿಗೆ ಬರುವ ಜನರನ್ನು ಪರೀಕ್ಷಿಸಲು ಅಗತ್ಯ ಇನ್ಪಾರ್ಡ್ ಥರ್ಮೊ ಮೀಟರ್, ವೈಯಕ್ತಿಕ ಸುರಕ್ಷಾ ದಿರಿಸು (ಪಿಪಿಇ) ಸೆಟ್ ಲಭ್ಯವಿಲ್ಲ. ಕನಿಷ್ಠ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಸಿಬ್ಬಂದಿಗೂ ಗುಣಮಟ್ಟದ ಮಾಸ್ಕ್ ಒದಗಿಸಿಲ್ಲ. ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿಯೇ ಅನಾರೋಗ್ಯಕರ ವಾತಾವರಣ ಇರುವುದು ರೋಗಿಗಳು ಪರದಾಡುವಂತಾಗಿದೆ.

ಪೊಲೀಸರಿಗೆ ಆಹಾರ ಪೂರೈಕೆ: ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಲಾಕ್‌ಡೌನ್ ಸ್ಥಿತಿಯಿಂದ ಹೋಟೆಲ್‌ಗಳಿಲ್ಲದೆ ಊಟ ತಿಂಡಿಗಾಗಿ ಪರದಾಡುವಂತಾಗಿತ್ತು. ಪರಿಸ್ಥಿತಿ ತಿಳಿದ ಕೋಟೆ ಶ್ರೀಈಶ್ವರ ದೇಗುಲದ ಶಿವಪ್ರಿಯ ಸೇವಾ ಸಮಿತಿ ಸದಸ್ಯರು ಏ.14ರ ವರೆಗೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಧ್ಯಾಹ್ನದ ಊಟ ನೀಡಲು ನಿರ್ಧರಿಸಿ ಗುರುವಾರ ಮಧ್ಯಾಹ್ನದಿಂದ ಆಹಾರ ಪೂರೈಸುತ್ತಿದೆ.