ಜಿಲ್ಲೆ

ಬಿಜೆಪಿಯಲ್ಲಿ ಸಾಮಾನ್ಯನಿಗೆ ಸ್ಥಾನಮಾನ

Chitradurga

ಹೊಸದುರ್ಗ: ಸಾಮಾನ್ಯ ಕಾರ್ಯಕರ್ತನಿಗೂ ಸ್ಥಾನಮಾನ ದೊರೆಯುವುದು ಬಿಜೆಪಿಯಲ್ಲಿ ಮಾತ್ರ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಹಾಗೂ ಪೌರತ್ವ ಕಾಯ್ದೆ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ದೊರೆಯುತ್ತಿದೆ ಎಂದರು.

ತಾಲೂಕಿನಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಮೂಲಕ ಮುಂದಿನ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ನಾವೇ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಸಂಘಟನೆ ಅಗತ್ಯ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಮೂರ್ತಿ ಬೆಂಬಲದಿಂದ ನನಗೆ ಗೆಲುವು ಸಾಧ್ಯವಾಯಿತು. ಪುರಸಭೆ ಚುನಾವಣೆಯಲ್ಲೂ ಪಕ್ಷ ಉತ್ತಮ ಸಾಧನೆ ಮಾಡಿದೆ. ನೂತನ ಅಧ್ಯಕ್ಷ ಜಗದೀಶ್ ಅವಧಿಯಲ್ಲಿ ಗೆಲುವಿನ ಅಭಿಯಾನ ಮುಂದುವರಿಯುವ ಅಶಾಭಾವನೆಯಿದೆ ಎಂದು ತಿಳಿಸಿದರು.

ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ಮಾತನಾಡಿ, ಬಿಜೆಪಿಯಲ್ಲಿ ಮಾತ್ರ ಸಾಮಾನ್ಯ ಕಾರ್ಯಕರ್ತನಿಗೂ ರಾಜ್ಯಾಧ್ಯಕ್ಷನಾಗುವ ಅವಕಾಶವಿದೆ. ಅದಕ್ಕೆ ನಳೀನ್ ಕುಮಾರ್ ಕಟೀಲು ಪ್ರತ್ಯಕ್ಷ ಸಾಕ್ಷಿ ಎಂದರು.

ತಾಲೂಕಿನಲ್ಲಿ ಪಕ್ಷ ಬಲಿಷ್ಠವಾಗಿದೆ. ಕಳೆದ 15 ವರ್ಷದಲ್ಲಿ ನೂರಕ್ಕೂ ಹೆಚ್ಚು ಜನಪರ ಚಳವಳಿ ನಡೆಸುವ ಮೂಲಕ ಪಕ್ಷವನ್ನು ಬಲವಾಗಿ ಸಂಘಟಿಸಿದ್ದೇವೆ ಎಂದು ತಿಳಿಸಿದರು.

ಗೂಳಿಹಟ್ಟಿ ಡಿ.ಶೇಖರ್ ಅವರೊಂದಿಗೆ ಕೈಜೋಡಿಸಿ ವಿಧಾನಸಭೆ ಚುನಾವಣೆ ಗೆದ್ದಿದ್ದೇವೆ. ಮುಂದೆಯೂ ಒಟ್ಟಾಗಿ ಪಕ್ಷ ಕಟ್ಟುತ್ತೇವೆ ಎಂದರು.

ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಮಾತನಾಡಿ, ಸಂಸದನಾಗಿ 370ನೇ ವಿಧಿ ರದ್ದು ಹಾಗೂ ಪೌರತ್ವ ಕಾಯಿದೆ ಪರ ಸಂಸತ್ತಿನಲ್ಲಿ ಮತ ಚಲಾಯಿಸಿದ್ದು ನನ್ನ ಬದುಕಿನ ಸುವರ್ಣ ಗಳಿಗೆಯಾಗಿದೆ ಎಂದು ತಿಳಿಸಿದರು.

370ನೇ ವಿಧಿಯ ರದ್ದಿನ ನಂತರ ಕಾಶ್ಮೀರಕ್ಕೆ ನಿಜವಾದ ಅಸ್ತಿತ್ವ ದೊರೆತಿದೆ. ಪಿಒಕೆ ಕೂಡ ಭಾರತದ ವಶವಾಗುವ ದಿನಗಳು ದೂರವಿಲ್ಲ. ಪೌರತ್ವ ಕಾಯ್ದೆ ಕುರಿತು ಕಾಂಗ್ರೆಸ್ ಅನಗತ್ಯವಾಗಿ ಜನರಲ್ಲಿ ಭಯ ಹುಟ್ಟಿಸುತ್ತಿದೆ ಎಂದು ದೂರಿದರು.

ಬಿಜೆಪಿ ಮಂಡಲದ ನೂತನ ಅಧ್ಯಕ್ಷ ಗೂಳಿಹಟ್ಟಿ ಆರ್.ಜಗದೀಶ್ ಅವರಿಗೆ ನಿಕಟಪೂರ್ವ ಅಧ್ಯಕ್ಷ ಡಿ.ಟಿ.ವಟ್ಟಿ ಲಕ್ಷ್ಮಣ್ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಿದರು.

ಪಕ್ಷದ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್, ಆರ್.ಡಿ.ಸೀತಾರಾಂ, ಎಂ.ಲಕ್ಷ್ಮಣ್ ಮತ್ತಿತರರಿದ್ದರು.