ಜಿಲ್ಲೆ

ಹಣದ ಬದಲು ಗುಣ ಮುಖ್ಯ

Chitradurga

ಹೊಸದುರ್ಗ: ಸಾರ್ವಜನಿಕ ಸೇವೆಯಲ್ಲಿರುವ ಜನರು ಪ್ರಾಮಾಣಿಕತೆ, ಸರಳತೆಯ ಬೆನ್ನತ್ತಿದರೆ ಮಾತ್ರ ಬದುಕಿನಲ್ಲಿ ಗೌರವ ದೊರೆಯುತ್ತದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

ಇಲ್ಲಿನ ಕುಂಚಿಟಿಗ ಮಠದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ 36ನೇ ಸುಜ್ಞಾನ ಸಂಗಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಹಣದ ಬದಲು ಗುಣ ಗಳಿಕೆಯತ್ತ ಚಿತ್ತ ಹರಿಸಬೇಕು ಎಂದರು.

ಗುಣದ ಅರಿವಿಲ್ಲದ ಜನರು ಹಣದ ಹಿಂದೆ ಹೋಗಿ ಗೌರವ ಕಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಸಮಾಜಕ್ಕೆ ಒಳಿತು ಮಾಡುವ ಬದ್ಧತೆಯಿದ್ದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಸಾರ್ವಜನಿಕರ ಬದುಕಿಗೆ ಸಹಕಾರಿಯಾಗುವಂತೆ ಸಂಸ್ಥೆಗಳು ಆಡಳಿತ ನಡೆಸಬೇಕು. ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟಿರುವ ಸೇವಕರು ಸಾರ್ವಜನಿಕ ಹಣವನ್ನು ಸಂಬಂಧಿಗಳಿಗೆ, ಸ್ವಾರ್ಥಕ್ಕೆ ಬಳಸದೇ ಆರ್ಥಿಕ ಚೈತನ್ಯವಿಲ್ಲದವರಿಗೆ ಸಹಾಯ ಮಾಡಬೇಕು ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಬಿ.ಮಂಜುನಾಥ್ ಮಾತನಾಡಿ, ಶಾಂತವೀರ ಶ್ರೀಗಳು ಸುಜ್ಞಾನ ಸಂಗಮದ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಶ್ರೀಗಳು ದೊರೆತಿರುವುದು ಸಮಾಜಕ್ಕೆ ವರವಾಗಿದೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್, ಎಚ್.ವೈ.ಕಾಂತರಾಜು, ಪ್ರಾಚಾರ್ಯ ಟಿ.ಬಸಪ್ಪ, ಉದ್ಯಮಿ ದೇವರಾಜು ಮತ್ತಿತರರು ಇದ್ದರು.