ಹೊಸದುರ್ಗ: ಗುಜರಾತ್‌ನಿಂದ ಹೊಸದುರ್ಗ ಪಟ್ಟಣಕ್ಕೆ ಶನಿವಾರ ಬಂದಿದ್ದ ಖಾಸಗಿ ಬಸ್ ಕೆಲ ಸಮಯ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಹೊಸದುರ್ಗ ಪೋಲಿಸರ ಮಧ್ಯ ಪ್ರವೇಶದಿಂದ ಜನರ ಆತಂಕ ದೂರವಾಗಿ, ಪರಿಸ್ಥಿತಿ ತಿಳಿಗೊಂಡಿತು.
ಮಾರ್ಚ್ 20ರಂದು ಗುಜರಾತ್‌ನಿಂದ ಹೊಸದುರ್ಗಕ್ಕೆ ಬಂದಿದ್ದ 18 ಜನ ತಬ್ಲಿಘಿ ಸಂಘಟನೆ ಸದಸ್ಯರು ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿಯೇ ಸಿಲುಕಿಕೊಂಡಿದ್ದರು. ತಾಲೂಕು ಆಡಳಿತ ಇವರಿಗೆ ಕೋವಿಡ್ ಟೆಸ್ಟ್ ಮಾಡಿಸಿ ಕ್ವಾರಂಟೈನ್ ಮಾಡಿತ್ತು.
ಕ್ವಾರಂಟೈನ್ ಅವಧಿ ಮುಗಿದ ನಂತರವೂ ಲಾಕ್‌ಡೌನ್ ಮುಂದುವರಿದ ಪರಿಣಾಮ ಗುಜರಾತಿಗೆ ತೆರಳಲು ಸಾಧ್ಯವಾಗಿರಲಿಲ್ಲ. ತಬ್ಲಿಘಿ ಸಂಘಟನೆ ಸ್ಥಳಿಯ ಸಮಿತಿಯು ತಾಲೂಕು ಆಡಳಿತದಿಂದ ಅನುಮತಿ ಪಡೆದು ಇವರೆಲ್ಲರನ್ನೂ ಗುಜರಾತ್‌ಗೆ ಕಳಿಸಲು ಅಲ್ಲಿಂದಲೇ ಖಾಸಗಿ ಬಸ್ ಕರೆಸಿಕೊಂಡಿತ್ತು.
ಗುಜರಾತ್ ನೋಂದಣಿ ಸಂಖ್ಯೆಯ ಬಸ್ಸಿನಲ್ಲಿ ಚಾಲಕ ಸೇರಿ ಮೂವರು ಮಾತ್ರ ಇದ್ದರು. ಇದರಿಂದ ಸಂಶಯಗೊಂಡ ಸ್ಥಳೀಯರು, ಬಸ್ಸನ್ನು ತಡೆದು ನಿಲ್ಲಿಸಿದ್ದರು. ಈ ವೇಳೆ ಗೊಂದಲ, ಆತಂಕ ಸ್ಥಳದಲ್ಲಿ ಉಂಟಾಗಿತ್ತು.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಶಿವಕುಮಾರ್ ಹಾಗೂ ಸಿಬ್ಬಂದಿ ಬಸ್ ದಾಖಲೆಗಳನ್ನು ಪರಿಶೀಲಿಸಿ ಪಟ್ಟಣದ ಹೊರವಲಯಕ್ಕೆ ತೆಗೆದುಕೊಂಡು ಹೋದರು. ಬಳಿಕ ಅಲ್ಲಿಗೆ ಪಟ್ಟಣದಲ್ಲಿ ಉಳಿದುಕೊಂಡಿದ್ದ ಗುಜರಾತಿನ 18 ತಬ್ಲಿಘಿ ಸದಸ್ಯರನ್ನು ಅಲ್ಲಿಗೆ ಕರೆದೊಯ್ದು ಬಸ್ ಹತ್ತಿಸಿ, ತಾಲೂಕಿನ ಗಡಿಯವರಗೆ ಪೊಲೀಸ್ ರಕ್ಷಣೆಯಲ್ಲಿ ಕಳುಹಿಸಿಕೊಟ್ಟರು.
ಸಾಮಾಜಿಕ ಜಾಲತಾಣದಲ್ಲಿ ವಾಸ್ತವತೆ: ಪಟ್ಟಣಕ್ಕೆ ಬಸ್ ಬಂದ ವೇಳೆ ಸ್ಥಳದಲ್ಲಿದ್ದವರು ತೆಗೆದ ಬಸ್‌ನ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಜನರಲ್ಲಿ ಅಂತಕ ಹೆಚ್ಚಾಗಿತ್ತು. ಪಿಎಸ್‌ಐ ಶಿವಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ವಾಸ್ತವ ಪರಿಸ್ಥಿತಿಯನ್ನು ವಿವರಿಸುವ ಮೂಲಕ ಜನರಲ್ಲಿ ಮನೆಮಾಡಿದ್ದ ಸಂಶಯ ದೂರಮಾಡಿದರು.