ಹೊಸದುರ್ಗ: ತಾಲೂಕಿನ ಆಡವಿಸಂಗೇನಹಳ್ಳಿ ಗ್ರಾಮದಲ್ಲಿ ಫೆ.28ರ ಶುಕ್ರವಾರ ರಾಜ್ಯಮಟ್ಟದ 30ನೇ ಶ್ರೀ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ಕುಂಚಿಟಿಗರ ಸಮಾವೇಶ ಜರುಗಲಿದ್ದು, ಶ್ರೀ ಶಾಂತವೀರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.
ಶುಕ್ರವಾರ 11ಕ್ಕೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸಮಾವೇಶ ಉದ್ಘಾಟಿಸಲಿದ್ದಾರೆ. ಶ್ರೀ ಶಿವಮೂರ್ತಿ ಮುರುಘಾ ಶರಣರು, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಶ್ರೀ ಹನುಮಂತನಾಥ ಸ್ವಾಮೀಜಿ, ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಕುಂಚಿಟಿಗ ಸಮಾಜದ ಅಧ್ಯಕ್ಷ ಕೆ.ಸಿ.ಸಿದ್ದಪ್ಪ ಅಧ್ಯಕ್ಷತೆ ವಹಿಸಲಿದ್ದು, ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್, ಎಂ.ಪಿ.ರೇಣುಕಾಚಾರ್ಯ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಸತ್ಯನಾರಾಯಣ, ವೀರಭದ್ರಯ್ಯ, ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ, ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ರಾಜ್ಯಮಟ್ಟದ ಸಮಾವೇಶಕ್ಕಾಗಿ ಅಡವಿಸಂಗೇನಹಳ್ಳಿ ಗ್ರಾಮದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಸೇರಿ ವಿವಿಧ ಸಿದ್ಧತೆಗಳು ಭರದಿಂದ ನಡೆದಿವೆ. ರಾಜ್ಯದ ವಿವಿಧೆಡೆಯಿಂದ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಲಿಸದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ಜನರಿಗಾಗಿ ವಿಶೇಷ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ವಿಜಯರಾಜ ಸಂಗಮೇಶ್ವರ ಜಯಂತಿ: ಕುಂಚಿಟಿಗ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಕಳೆದ 30 ವರ್ಷಗಳಿಂದ ಅಡವಿಸಂಗೇನಹಳ್ಳಿಯಲ್ಲಿರುವ ಕುಂಚಿಟಿಗರ ಆರಾಧ್ಯ ದೈವ ಶ್ರೀ ಸಂಗಮೇಶ್ವರ ಸ್ವಾಮಿ ಹೆಸರಿನಲ್ಲಿ ವಿಜಯರಾಯ ಸಂಗಮೇಶ್ವರ ಜಯಂತಿಯನ್ನು ಪ್ರತಿವರ್ಷ ಫೆ.28ರಂದು ಆಚರಿಸಲಾಗುತ್ತಿದೆ.
ಕುಂಚಿಟಿಗ ಗುರುಪೀಠ: ರಾಜ್ಯದ ಒಳಗೂ ಹೊರಗೂ ಹಂಚಿ ಹೋಗಿರುವ ಕುಂಚಿಟಿಗ ಸಮುದಾಯವನ್ನು ಸಂಘಟಿಸುವ ಮೂಲಕ ಜಾಗೃತಿಗೊಳಿಸಲು 1997ರಲ್ಲಿ ಶ್ರೀ ಶಾಂತವೀರ ಸ್ವಾಮೀಜಿ ನೇತೃತ್ವದಲ್ಲಿ ಹೊಸದುರ್ಗದ ಕುಂಚಗಿರಿಯಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠವನ್ನು ಹಾಗೂ ಶ್ರೀ ಸಂಗಮೇಶ್ವರ ಕಾಯಕ ಸಿಂಹಾಸನವನ್ನು ಸ್ಥಾಪಿಸಲಾಯಿತು. ಶ್ರೀ ಶಾಂತವೀರ ಸ್ವಾಮೀಜಿ ನೇತೃತ್ವದಲ್ಲಿ ಆಚರಣೆಯಾಗುವ ವಿಜಯರಾಯ ಸಂಗಮೇಶ್ವರ ಜಯಂತಿ ಕುಂಚಿಟಿಗ ಸಮುದಾಯದ ಸಾಂಸ್ಕೃತಿಕ ಹಬ್ಬವಾಗಿದೆ.