ಜಿಲ್ಲೆ

ಕ್ವಾರಂಟೈನ್‌ಗೆ ಅವಕಾಶ ಕೊಡದ ಜಿಪಂ ಸದಸ್ಯೆಗೆ ಲಾಠಿ ಏಟು

Chitradurga

ಹೊಸದುರ್ಗ: ಕೇರಳದಿಂದ ಬಂದವರ ಸಾಂಸ್ಥಿಕ ಕ್ವಾರಂಟೈನ್‌ಗೆ ಅವಕಾಶ ನಿರಾಕರಿಸಿದ್ದಕ್ಕೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಮತ್ತೋಡು ಕ್ಷೇತ್ರದ ಜಿಪಂ ಸದಸ್ಯೆಗೆ ಪೆಟ್ಟು ಬಿದ್ದಿದೆ.

ಶ್ರೀರಾಂಪುರ ಹೋಬಳಿಯ 21 ಜನರನ್ನು ಮಂಗಳವಾರ ಮತ್ತೋಡು ಹೋಬಳಿಯ ಸಿದ್ದಾಪುರದ ಬಳಿಯ ಇಂದಿರಾಗಾಂಧಿ ಪ್ರೌಢಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಕರೆತರಲಾಗಿತ್ತು. ಆಗ ಜಿಪಂ ಸದಸ್ಯೆ, ಸ್ಥಳೀಯರಾದ ಚೇತನಾ ಪ್ರಸಾದ್ ಇತರರು ವಿರೋಧ ವ್ಯಕ್ತಪಡಿಸಿದ್ದಾರೆ. ಶ್ರೀರಾಂಪುರ ಹೋಬಳಿಯಲ್ಲೇ ಶಾಲಾ ಕಟ್ಟಡಗಳಿರುವಾಗ ಇಲ್ಲಿಗೆ ಕರೆತರುವ ಅಗತ್ಯವೇನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸ್ಥಳಿಯರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಚೇತನಾ ಪ್ರಸಾದ್ ಅವರಿಗೂ ಏಟು ಬಿದ್ದಿವೆ.

ವಿವಾದದ ಹಿನ್ನೆಲೆ: ಸೋಮವಾರ ಸಂಜೆ ಶ್ರೀರಾಂಪುರ ಹೋಬಳಿಯ ಕೃಷ್ಣಾಪುರ, ಹೈದರ್‌ಸಾಬ್ ಪಾಳ್ಯಕ್ಕೆ ಸೇರಿದ 21 ಜನರು ಕಾಸರಗೋಡಿನಿಂದ ರಾಜ್ಯ ಸರ್ಕಾರದ ಅನುಮತಿ ಪಡೆದು ತಾಲೂಕಿಗೆ ಬಂದಿದ್ದರು.

ಸರ್ಕಾರದ ನಿಯಮದಂತೆ ಅವರನ್ನು 14 ದಿನ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲು ತಾಲೂಕು ಆಡಳಿತ ಮುಂದಾಗಿತ್ತು. ಸೋಮವಾರ ರಾತ್ರಿ 12 ಕ್ಕೆ ಪೊಲೀಸರ ರಕ್ಷಣೆಯೊಂದಿಗೆ ಎರಡು ಆಂಬುಲೆನ್ಸ್‌ಗಳಲ್ಲಿ ಶ್ರೀರಾಂಪುರ ಹೋಬಳಿಯ ತಂಡಗ ಗ್ರಾಮದ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ಕರೆತರಲಾಗಿತ್ತು. ಅಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮರಳಿ ಕರೆದೊಯ್ಯಲಾಗಿತ್ತು.

ಕ್ವಾರಂಟೈನ್‌ಗೆ ಅಡ್ಡಿಪಡಿಸಿದ ಕಾರಣಕ್ಕೆ ಸಾಂಕ್ರಾಮಿಕ ರೋಗ ತಡೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ತಹಸೀಲ್ದಾರ್ ತಿಪ್ಪೇಸ್ವಾಮಿ ಶ್ರೀರಾಂಪುರ ಠಾಣೆಗೆ ದೂರು ನೀಡಿದ್ದರು. ಈಗ ತಂಡಗ ಗ್ರಾಮದ ಬಿಜೆಪಿ ಮುಖಂಡ ಎಚ್.ಆರ್. ಕಲ್ಲೇಶಪ್ಪ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಟಿ.ಬಿ. ಮಂಜುನಾಥ್ ಸೇರಿ 21 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.