ಹೊಸದುರ್ಗ: ಪಟ್ಟಣದ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ರೈತರ ಕಾಲಿಗೆ ಬಿದ್ದು ಕೆಲ್ಲೋಡು ಬ್ಯಾರೇಜಿಗೆ ನೀರು ಹರಿಸಲಾಗಿದೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕೊರಟಿಗೆರೆ ಗ್ರಾಮದ ರೈತರ ಒಪ್ಪಿಗೆ ಪಡೆದ ನಂತರವೇ ಆ ಊರಿನ ಬ್ಯಾರೇಜಿನಲ್ಲಿದ್ದ 12 ಆಡಿ ನೀರಿನಲ್ಲಿ 4 ಆಡಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಕೆಲ್ಲೋಡು ಬ್ಯಾರೇಜಿಗೆ ಹರಿಸಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಬಲ ಪ್ರಯೋಗಿಸಿರುವ ಸಂಗತಿ ಸತ್ಯವಲ್ಲ. ತಾಲೂಕಿನಲ್ಲಿ ಪೊಲೀಸರನ್ನು ಬಳಸಿಕೊಂಡು ರಾಜಕೀಯ ಮಾಡಿದವರು ಯಾರು ಎನ್ನುವ ಸತ್ಯ ಜನರಿಗೆ ತಿಳಿದಿದೆ. ಜನರೊಂದಿಗೆ ಉತ್ತಮ ಸಂಭದವಿಟ್ಟುಕೊಂಡು ನೀರು ಹರಿಸಿದರೂ ಪಟ್ಟಣದಲ್ಲಿರುವ ಹಿಂಬಾಲಕರ ಹಿತರಕ್ಷಣೆಗಾಗಿ ಮಾಜಿ ಶಾಸಕರು ಅನಗತ್ಯ ಆರೋಪ ಮಾಡಿದ್ದಾರೆ ಎಂದು ದೂರಿದರು.
ಕೆಲ್ಲೋಡು ಬ್ಯಾರೇಜಿನಲ್ಲಿ ನೀರು ಖಾಲಿಯಾದರೆ ವಿವಿ ಸಾಗರದ ಹಿನ್ನೀರಿನಿಂದ 12 ಸಾವಿರ ಲೀಟರ್ ಸಾಮರ್ಥ್ಯದ 10 ಲಾರಿಗಳ ಮೂಲಕ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಆಕ್ರಮ ಮರಳು ಗಣಿಗಾರಿಕೆ ನಡೆಸಲು ಬ್ಯಾರೇಜ್ ನೀರು ತೆರವು ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು. ಅಂತಹ ಕೆಲಸ ಎಂದಿಗೂ ಮಾಡುವುದಿಲ್ಲ. ಮರಳು ಗಣಿಗಾರಿಕೆ ನಡೆಸಿದವರ‌್ಯಾರೆಂಬ ವಿಚಾರ ಜನರಿಗೆ ಗೊತ್ತಿದೆ ಎಂದರು.
ವಾಣಿವಿಲಾಸ ಸಾಗರದ ಹಿನ್ನೀರಿನಿಂದ ಪಟ್ಟಣಕ್ಕೆ ನೀರು ತರುವ ಯೋಜನೆಗೆ 2013ರಲ್ಲೇ ಚಿಂತಿಸಲಾಗಿತ್ತು. ಇದರಿಂದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ನಾನು ಎರಡು ಬಾರಿ ಶಾಸಕ, ಸಚಿವನಾಗಿದ್ದೇನೆ. ಪದವಿ ಶಿಕ್ಷಣ ಪಡೆದಿದ್ದರಿಂದ ಜನತೆಗೆ ಒಳಿತು ಮಾಡುವುದು ಹೇಗೆಂಬುದು ನನಗೆ ತಿಳಿದಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನಗತ್ಯ ಟೀಕೆ ಮಾಡುವುದು ಮಾಜಿ ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.