ಜಿಲ್ಲೆ

ಕರೊನಾ ವಿರುದ್ಧ ಹೋರಾಟಕ್ಕೆ ಸಹಕರಿಸಿ

Chitradurga

ಹೊಸದುರ್ಗ: ಕರೊನಾ ವಿರುದ್ಧದ ಹೋರಾಟದಲ್ಲಿ ಸರ್ವಧರ್ಮಿಯರೆಲ್ಲರೂ ಒಟ್ಟಾಗಿ ಪಾಲ್ಗೊಳ್ಳುವ ಅನಿವಾರ್ಯತೆ ಇದೆ ಎಂದು ಸಿಪಿಐ ಫೈಜುಲ್ಲಾ ತಿಳಿಸಿದರು.

ಕೋವಿಡ್-19 ತಡೆಗಾಗಿ ಪುರಸಭೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಪ್ರಪಂಚವೇ ಕರೊನಾ ಭೀತಿಯಿಂದ ತತ್ತರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೋಗಕ್ಕೆ ಜಾತಿ, ಧರ್ಮದ ಬಣ್ಣ ಹಚ್ಚುವ ಕೆಲಸ ಸರಿಯಲ್ಲ. ವೈರಸ್ ಲಕ್ಷಣ ಉಳ್ಳವರು ಸ್ವ ಪ್ರೇರಣೆಯಿಂದ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕು ಎಂದು ಮನವಿ ಮಾಡಿದರು.

ಕೋವಿಡ್-19 ತಡೆ ವಿರುದ್ಧದ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದರೆ ಅಂತವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಿಎಸ್‌ಐ ಶಿವಕುಮಾರ್ ಮಾತನಾಡಿ, ಹೊಸದುರ್ಗದ ಜನತೆ ಕರೊನಾ ವಿರುದ್ಧದ ಕಾರ್ಯಾಚರಣೆಗೆ ಉತ್ತಮ ಬೆಂಬಲ ನೀಡಿದ್ದಾರೆ. ಆದರೂ ಕೆಲವರು ಲಾಕ್‌ಡೌನ್ ಪಾಲಿಸದೆ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಅಂತವರ ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್ ಮಾತನಾಡಿ, ದೇಶ ಕರೊನಾ ರೋಗದಿಂದ ಗಂಡಾಂತರ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಕೋಮು ಭಾವನೆ ಬಿತ್ತುವುದು ಸರಿಯಲ್ಲ. ಇಂತಹ ಕೆಲಸಕ್ಕೆ ಯಾರೂ ಕೈ ಹಾಕಬಾರದು ಎಂದು ಮನವಿ ಮಾಡಿದರು.

ಮಾಜಿ ಶಾಸಕರಾದ ಇಳ್ಕಲ್ ವಿಜಯಕುಮಾರ್, ಟಿ.ಎಚ್.ಬಸವರಾಜಪ್ಪ, ಪುರಸಭೆ ಸದಸ್ಯರಾದ ಜಾಫರ್ ಸಾದಿಕ್, ದೊಡ್ಡಯ್ಯ, ನಾಗರಾಜ್, ಟೌನ್ ಕೋ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಆಗ್ರೋ ಶಿವಣ್ಣ, ವರ್ತಕರ ಸಂಘದ ಅಧ್ಯಕ್ಷ ಇ.ಟಿ.ಬಾಹುಬಲಿ ಇತರರಿದ್ದರು.