ಜಿಲ್ಲೆ

ಜ.12ಕ್ಕೆ ಎಂಡೋಸಲ್ಫಾನ್​ ಪುನರ್ವಸತಿ ಕೇಂದ್ರಕ್ಕೆ ಶಿಲಾನ್ಯಾಸ

ಗೋಪಾಲಕೃಷ್ಣ ಪಾದೂರ್

ಉಡುಪಿ: ಎಂಡೋಸಲ್ಫಾನ್​ ದುರಂತದಲ್ಲಿ ಅಂಗವಿಕಲರಾಗಿ ಬಳಲುತ್ತಿರುವ ಹೆಣ್ಣು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಹೊಸಬೆಳಕು ಟ್ರಸ್ಟ್​ ವತಿಯಿಂದ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಜ.12ರಂದು ಬೆಳಗ್ಗೆ 9.30ಕ್ಕೆ ಸೇವಾಶ್ರಮ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ತನುಲಾ ತರುಣ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೈಲೂರಿನ ಹೊಸಬೆಳಕು ಟ್ರಸ್ಟ್​ ನ ಪಕ್ಕದಲ್ಲಿ ದಾನಿಗಳು ನೀಡಿದ 32 ಸೆಂಟ್ಸ್​ ಜಾಗದಲ್ಲಿ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ. ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್​ ಶಾನುಭಾಗ್​, ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹಾಗು ಮನೋವೈದ್ಯ ಡಾ.ಪಿ.ವಿ ಭಂಡಾರಿ ಭಾಗವಹಿಸಲಿದ್ದಾರೆ ಎಂದರು.

ಎಂಡೋಸಲ್ಫಾನ್​ ಪೀಡಿತ ಶೇ. 80ಕ್ಕೂ ಅಧಿಕ ಅಂಗವಿಕಲತೆಯುಳ್ಳ ಹೆಣ್ಣು ಮಕ್ಕಳು ಸುಮಾರು 900 ಮಂದಿ ಸಂತ್ರಸ್ತರಿದ್ದಾರೆ. ಹೀಗಾಗಿ ಹೊಸಬೆಳಕು ಸಂಸ್ಥೆಯಲ್ಲಿ 150 ಹೆಣ್ಣು ಮಕ್ಕಳಿಗಾಗಿ ಪುನರ್ವಸತಿ ಸೇವಾಶ್ರಮವನ್ನು ಸ್ಥಾಪಿಸಲು ಮುಂದಾಗಿದ್ದೇವೆ. ಪ್ರಸ್ತುತ 2 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಟ್ಟಡ ಕಾಮಗಾರಿ ನಡೆಯಲಿದ್ದು, 50 ಮಂದಿಗೆ ಪುನರ್ವಸತಿ ಕಲ್ಪಿಸಬಹುದು. ಮುಂದಿನ ದಿನಗಳಲ್ಲಿ 3 ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇಲ್ಲಿ ಪಿಸಿಯೋಥೆರಪಿ, ಔಷಧ, ಸೂಕ್ತ ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಸಂಪೂರ್ಣ ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತರಿಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಇವರ ಆಯ್ಕೆಗಾಗಿ ಸರಕಾರಿ ವೈದ್ಯರನ್ನೂ ಒಳಗೊಂಡಂತೆ ಪರಿಣಿತರ ಸಮಿತಿಯನ್ನು ರೂಪಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಾರ್ಯದರ್ಶಿ ಅನುರಾಗ್​ ಕಿಣಿ, ಟ್ರಸ್ಟಿಗಳಾದ ಅನಿಲ್​ ದೇವಾಡಿಗ, ಮಾಜಿ ತಹಶೀಲ್ದಾರ್​ ಮುರುಳಿಧರ್​, ಪ್ರಮುಖರಾದ ರಮೇಶ್​ ಶೆಣೈ, ಸ್ವಾತಿ, ನಂದನ್​ ಉಪಸ್ಥಿತರಿದ್ದರು.