ಜಿಲ್ಲೆ

ತಮ್ಮೇನಹಳ್ಳಿ ಫಾರಂನಲ್ಲಿ ಹಣ್ಣಿನ ಬಂಪರ್ ಬೆಳೆ

ಕೆ.ಕೆಂಚಪ್ಪ ಮೊಳಕಾಲ್ಮೂರು: ದಶಕಗಳ ಕಾಲ ಲಾಭ-ನಷ್ಟ ಸರಿದೂಗಿಸಿಕೊಂಡು ಬಂದಿದ್ದ ತಾಲೂಕಿನ ತಮ್ಮೇನಹಳ್ಳಿ ತೋಟಗಾರಿಕೆ ಹಣ್ಣಿನ ಫಾರಂ ಈ ಸಲ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಆದಾಯ ತುಂಬುವ ಭರವಸೆ ಮೂಡಿಸಿದೆ.

ತಮ್ಮೇನಹಳ್ಳಿ ಸಮೀಪ ತೋಟಗಾರಿಕೆ ಇಲಾಖೆಗೆ ಸೇರಿದ 77 ಎಕರೆಯಲ್ಲಿ ಈ ವರ್ಷ ಹಣ್ಣುಗಳಿಂದಲೇ ಆರೇಳು ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.

ಕಳೆದ ಮಳೆಗಾಲದಲ್ಲಿ ಸುರಿದ ಭರ್ಜರಿ ವರ್ಷಧಾರೆ ತೋಟಗಾರಿಕೆ ಬೆಳೆಗಳಿಗೆ ಜೀವಕಳೆ ತಂದಿತ್ತು. ಜತೆಗೆ ಇಲಾಖೆ ಸಿಬ್ಬಂದಿ ಪಾರಂನಲ್ಲಿರುವ ಗಿಡಗಳಿಗೆ ನೀರು ಗೊಬ್ಬರ ಕೊಟ್ಟು ಉತ್ತಮ ರೀತಿಯಲ್ಲಿ ಆರೈಕೆ ಮಾಡಿದ ಹಿನ್ನೆಲೆಯಲ್ಲಿ ಉತ್ತಮ ಫಸಲಿನ ಭರವಸೆ ಮೂಡಿಸಿದೆ.

ಸಪೋಟ-1050, ನೇರಳೆ-500, ಹುಣಸೆ-300, ನಿಂಬೆ-250 ಗಿಡಗಳಿವೆ. ಇದರ ಜತೆಗೆ ಇನ್ನಿತರ ಹಣ್ಣಿನ ಗಿಡಗಳೂ ಇವೆ. ನುಗ್ಗೆ ಮರಗಳೂ ಇವೆ.

ಎರಡು ಎರೆಹುಳು ಉತ್ಪಾದನೆ ಘಟಕ, 4 ಹಸುಗಳು, 4 ಕೃಷಿಹೊಂಡ, 2 ಕೊಳವೆ ಬಾವಿಗಳು ಫಾರಂನಲ್ಲಿವೆ. ಹನಿ ನೀರಾವರಿ ಸೌಲಭ್ಯ ಅಳವಡಿಸಿಕೊಳ್ಳಲಾಗಿದೆ.

ಈ ವರ್ಷ ಸಮೃದ್ಧ ನೀರಿನ ಲಭ್ಯತೆಯಿಂದ 1050 ಸಪೋಟ ಮರಗಳಿಂದ 2.50 ಟನ್ ಹಣ್ಣು ಸಿಗುವ ಗುರಿ ಇದೆ. ಪಸ್ತುತ ಕಟಾವಿಗೆ ಬಂದಿದೆ. ಒಂದು ಕೆಜಿಗೆ 30 ರೂ.ನಂತೆ ಮಾರಾಟವಾದರೂ ಐದಾರು ಲಕ್ಷ ರೂ. ಆದಾಯ ಬರಲಿದೆ.

ಅದೇ ರೀತಿ ಹುಣಸೆ ಹಾಗೂ ನೇರಳೆ ಆದಾಯದ ಮೂಲಗಳಾಗಿವೆ. ಎರೆಹುಳು ಗೊಬ್ಬರ ವರ್ಷಕ್ಕೆ 25 ಟನ್ ಮಾರಾಟವಾಗುತ್ತದೆ. ಒಂದು ಕೆಜಿಗೆ 9 ರೂ.ನಂತೆ ರೈತರು ಖರೀದಿ ಮಾಡುತ್ತಾರೆ. ಇಷ್ಟೆಲ್ಲ ಆದಾಯದ ಮೂಲ ಹೊಂದಿರುವ ಇಲಾಖೆ ಫಾರಂ ನಿರ್ವಹಣೆಗೆ ಪ್ರತಿ ವರ್ಷ 6 ರಿಂದ 8 ಲಕ್ಷ ರೂ. ಖರ್ಚು ಮಾಡುತ್ತಿದೆ.

ಫಾರಂನಲ್ಲಿ ರೈತರ ಅನುಕೂಲಕ್ಕಾಗಿ ತೆಂಗು, ತರಕಾರಿ ಸಸಿಗಳನ್ನು ಆರೈಕೆ ಮಾಡಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದಲೂ ಸರ್ಕಾರಕ್ಕೆ ಆದಾಯ ಬರಲಿದೆ.

2020 ರಿಂದ 3-4 ವರ್ಷಗಳ ಕಾಲ ಭೀಕರ ಬರ ಆವರಿಸಿ ಅಂತರ್ಜಲ ಕುಸಿತದಿಂದ ಸಮೃದ್ಧವಾಗಿದ್ದ ಫಾರಂಗೆ ಉಳಿಗಾಲ ಇಲ್ಲದಂತಾಗಿತ್ತು. ನಂತರದ ದಿನಗಳಲ್ಲೂ ಮಳೆಯ ಕಣ್ಣಾ ಮುಚ್ಚಾಲೆ ಆಟದಲ್ಲಿ ತೋಟ ಉಳಿಸಿಕೊಂಡಿದ್ದೆ ಹೆಚ್ಚು.

2023ರಲ್ಲೂ ಮಳೆಯ ಕೊರತೆ ದೊಡ್ಡ ತಲೆನೋವಾಗಿತ್ತು. 2024ರಲ್ಲಿ ವರುಣನ ಕೃಪೆಯಿಂದ ಇಡೀ ತೋಟ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ನರೇಗಾ ಯೋಜನೆಯಡಿ ಇಡೀ ತೋಟದ ಸುತ್ತಲೂ ಮಳೆ ನೀರು ಸಂಗ್ರಹಣೆಗೆ ಬದು ನಿರ್ಮಾಣ ಹಾಗೂ ಕಂದಕ ತೋಡಲಾಗಿದೆ.

ತೋಟಗಾರಿಕೆ ಪಿತಾಮಹ ಎಂದೇ ಪ್ರಸಿದ್ಧರಾಗಿದ್ದ ಎಂ.ಎಚ್. ಮರಿಗೌಡ ಅವರ ದೂರದೃಷ್ಟಿಯಿಂದ 1962 ರಲ್ಲಿ ಬೆಂಗಳೂರಿನ ಲಾಲ್​ಬಾಗ್ ಸೇರಿ ರಾಜ್ಯದ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 415 ಪ್ರತ್ಯೇಕ ತೋಟಗಾರಿಕೆ ಫಾರಂಗಳು ನಿರ್ವಣವಾದವು. ಇದರಿಂದ ಪ್ರತಿ ವರ್ಷ ಕೋಟ್ಯಂತರ ರೂ. ಆದಾಯ ಸರ್ಕಾರದ ಬೊಕ್ಕಸ ಸೇರುತ್ತಿದೆ.

ತೋಟಗಾರಿಕೆ ಫಾರಂಗಳ ಬೆಳವಣಿಗೆಗೆ ಸರ್ಕಾರದ ಮೇಲೆ ಒತ್ತಡ ಹಾಕಿದ ಪರಿಣಾಮ ಪ್ರಸ್ತುತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ತರಹೇವಾರಿ ಹಣ್ಣಿನ ತೋಟ ಕಟ್ಟಲು ಸಾಧ್ಯವಾಗಿದೆ. ರೈತರಿಗೆ ಕಡಿಮೆ ದರದಲ್ಲಿ ವಿವಿಧ ತಳಿಗಳ ಹಣ್ಣು ಮತ್ತು ತರಕಾರಿ ಸಸಿಗಳನ್ನು ಬೆಳೆಸಿ ವಿತರಿಸಲಾಗುತ್ತಿದೆ. ಈ ವರ್ಷ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ. | ಕೆ.ಎ. ಸುಧಾಕರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ.