ಜಿಲ್ಲೆ

ಮಾರುಕಟ್ಟೆಯಲ್ಲಿ ಅಡಕೆಗಿದೆ ಉತ್ತಮ ಧಾರಣೆ

ಚನ್ನಗಿರಿ: ಅಡಕೆ ಮರದ ಬುಡದ ಎರಡು ಅಡಿ ದೂರದಲ್ಲಿ ಅರ್ಧ ಅಡಿ ಮಣ್ಣು ತೆಗೆದು ಗೊಬ್ಬರ ಹಾಕಬೇಕು, ನೀರಿನ ತೇವಾಂಶ ಸಮತೋಲನದಲ್ಲಿಡಬೇಕು ಮತ್ತು ಸಾವಯವ ನಿರ್ವಹಣೆ ಮಾಡಿದರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ತೋಟಗಾರಿಕೆ ತಜ್ಞ ಎಚ್.ಎನ್. ಸಣ್ಣಗೌಡ್ರು ಸಲಹೆ ನೀಡಿದರು.

ತಾಲೂಕಿನ ಸಂತೇಬೆನ್ನೂರು ಹೋಬಳಿ ವ್ಯಾಪ್ತಿಯ ನಾಗೇನಹಳ್ಳಿ ಗ್ರಾಮದಲ್ಲಿ ಭಾನುವಾರ ಚನ್ನಗಿರಿ ತುಮ್ೋಸ್ ಸಂಸ್ಥೆಯಿಂದ ಏರ್ಪಡಿಸಿದ್ದ ಅಡಕೆಯಲ್ಲಿ ಪರ್ಯಾಯ ಬೆಳೆಗಳು ಮತ್ತು ಪೋಷಕಾಂಶಗಳ ನಿರ್ವಹಣೆ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಅಡಕೆಗೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುತ್ತಿದೆ, ಭವಿಷ್ಯದಲ್ಲಿ ಬೆಲೆ ಇನ್ನೂ ಅಧಿಕವಾಗುವ ಸಾಧ್ಯತೆ ಇದೆ. ಅಡಕೆ ಮರಗಳು ಉಳಿದರೆ ಮಾತ್ರ ಬೆಲೆ ಪಡೆಯಲು ಸಾಧ್ಯ. ಅದಕ್ಕಾಗಿ ಮರಕ್ಕೆ ಎರಡು ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ನೀಡಬೇಕು. ಅಣಬೆ ರೋಗ ಕಂಡುಬಂದಲ್ಲಿ ಹರಡದಂತೆ ಎಚ್ಚರ ವಹಿಸಬೇಕು. ಕೃಷಿ ತಜ್ಞರಿಂದ ಸೂಕ್ತ ಸಲಹೆ ಪಡೆದು ಮರಗಳನ್ನು ಕಾಪಾಡಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಅಡಕೆ ತೋಟಗಳಲ್ಲಿ ಕಳೆನಾಶಕ ಬಳಕೆ ಮಾಡಬೇಡಿ ಎಂದು ಮಾಹಿತಿ ನೀಡಿದರು.

ಅಡಕೆ ತೋಟದಲ್ಲಿ ಅಂತರ ಬೆಳೆಯಾಗಿ ಸೆಣಬು ಮತ್ತು ಡಯಂಚ ಬೆಳೆಯಬಹುದು. ಮಿಶ್ರ ಅರ್ಥಿಕ ಬೆಳೆಯಾಗಿ ಕಾಳು ಮೆಣಸು, ಕೋಕೋ, ಕಾಫಿ, ಬಾಳೆ ಹೆಚ್ಚು ಉಪಯುಕ್ತವಾಗಿವೆ. ಏಲಕ್ಕಿ ಬೆಳೆ ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ ಎಂದರು.

ಒಂದು ಟನ್ ಅಡಕೆ ಸಿಪ್ಪೆಗೆ ಒಂದು ಕೆಜಿ ಕಾಂಪೊಸ್ಟ್ ಮತ್ತು ಸಗಣಿ ಹಾಕಿ ಮಿಶ್ರಣ ಮಾಡಿದರೆ ಸಿಪ್ಪೆ ಬೇಗ ಕೊಳೆಯುತ್ತದೆ. ಪೊಟ್ಯಾಷ್ ಸರಿಪ್ರಮಾಣದಲ್ಲಿ ಹಂತ ಹಂತವಾಗಿ ನೀಡಬೇಕು. ಬೇಸಿಗೆಯಲ್ಲಿ ನೀಡಿದರೆ ಸೂಕ್ತ. ಇದರಿಂದ ಹರಳು ಉದುರುವುದನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

ತುಮ್ೋಸ್ ವ್ಯವಸ್ಥಾಪಕ ನಿರ್ದೇಶಕ ಎನ್.ಪಿ. ಮಧು ಮಾತನಾಡಿ, ಸಂಸ್ಥೆಯಿಂದ ಪ್ರಸಕ್ತ ವರ್ಷದಿಂದ ಮಣ್ಣು ಪರೀಕ್ಷೆ ಮಾಡಲಾಗುತ್ತಿದೆ. ನಮ್ಮ ಉಪಶಾಖೆಗಳಿಗೆ ರೈತರು ಮಣ್ಣು ನೀಡಿದರೆ ಸೇವಾ ಶುಲ್ಕದೊಂದಿಗೆ 40 ದಿನಗಳ ಒಳಗೆ ಪ್ರಮಾಣಪತ್ರ ನೀಡಲಾಗುತ್ತದೆ. ಕಾರ್ಯಾಗಾರ ಎಲ್ಲ ಶಾಖೆಗಳಲ್ಲಿ ನಡೆಸಲಾಗುತ್ತದೆ. ಇದರ ಸದುಪಯೋಗ ಪಡೆಯಬೇಕು ಎಂದರು.

ಕಾರ್ಯಾಗಾರದಲ್ಲಿ ಸಿದ್ದನಮಠ, ನುಗ್ಗೆಹಳ್ಳಿ, ಕಾಕನೂರು, ಕೊಂಡದಹಳ್ಳಿ, ಚನ್ನಾಪುರ, ಕೋಗಲೂರು, ಆಲೂರು, ಬೆಳ್ಳಿಗನೂಡು, ತಣಿಗೆರೆ, ಮೆದಿಕೆರೆ, ಎಕ್ಕೇಗೊಂದಿ ನಿತೀಗೆರೆ ಗ್ರಾಮದ ರೈತರು ಭಾಗಿಯಾಗಿದ್ದರು.