ಜಿಲ್ಲೆ

ತೋಟಗಾರಿಕೆ ಇಲಾಖೆ ಕಚೇರಿಗೆ 13ರಂದು ಬೀಗ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ರೈತರಿಗೆ ಇನ್ನೂ ಅಡಕೆ ಬೆಳೆ ವಿಮೆ ಹಣ ಮಂಜೂರಾಗಿಲ್ಲ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರುವತ್ತಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಈ ಬಾರಿ ಅಡಕೆ ಬೆಳೆಗಾರರು ಎಲ್ಲ ರೀತಿಯ ಸಂಕಷ್ಟ ಎದುರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಬೆಳೆ ವಿಮೆ ಮಾತ್ರ ಆಸರೆಯಾಗುತ್ತದೆ. ಪಕ್ಕದ ಸೊರಬದಲ್ಲಿ ರೈತರ ಖಾತೆಗೆ ವಿಮಾ ಹಣ ಜಮಾ ಆಗಿದೆ. ಹೆಕ್ಟೇರ್‌ಗೆ 75ಸಾವಿರ ರೂ.ಗೂ ಅಧಿಕ ಹಣ ಬಿಡುಗಡೆ ಆಗಿದೆ. ಸಾಗರದಲ್ಲಿ ಇನ್ನೂ ಅಧಿಕವಾಗಿದೆ. ಇಲ್ಲಿಯ ತೋಟಗಾರಿಕೆ ಇಲಾಖೆ ಏನು ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿದರು.

ರೈತರಿಗೆ ನ್ಯಾಯ ಒದಗಿಸಲು ಮುಂದಾಗದ ತೋಟಗಾರಿಕೆ ಇಲಾಖೆ ಕಚೇರಿಗೆ ಜ.13ರಂದು ಬೀಗ ಹಾಕಲಾಗುವುದು ತಿಳಿಸಿದರು.

ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಅವರು ಎಂಸಿಪಿ ಕನಿಷ್ಠ ಬೆಂಬಲ ಬೆಲೆ,ಡಾ.ಎಂ.ಎಸ್ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವಂತೆ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈಗ ಅವರ ಆರೋಗ್ಯ ಹದಗೆಟ್ಟಿದೆ. ಅವರನ್ನು ಬೆಂಬಲಿಸಿ ಜ.13ರಂದು ಶಿರಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಿದ್ದೇವೆ ಎಂದರು.

ರೈತ ಸಂಘದ ಪ್ರಮುಖರಾದ ಪ್ರಮೋದ್ ಜಗ್ಗಣ್ಣನವರ್, ರಾಜೇಶ ಖಂಡ್ರಾಜಿ, ಮಂಜುನಾಥ ಚಲವಾದಿ, ಮೋಹನ ನಾಯ್ಕ, ಇತರರಿದ್ದರು.