ಜಿಲ್ಲೆ

ಮೈಸೂರು ಪಾಲಿಕೆಯ ತೋಟಗಾರಿಕೆ ವಿಭಾಗ ನಿಷ್ಕ್ರಿಯ: ಪ್ರತಿಭಟನೆ

ಮೈಸೂರು: ಮಹಾನಗರ ಪಾಲಿಕೆಯ ತೋಟಗಾರಿಕೆ ವಿಭಾಗ ನಿಷ್ಕ್ರಿಯವಾಗಿದ್ದು, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಮೈಸೂರು ಗ್ರಾಹಕ ಪರಿಷತ್, ಪರಿಸರ ಬಳಗ, ಕ್ಲೀನ್ ಮೈಸೂರು ಫೌಂಡೇಷನ್ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.


ಪಾಲಿಕೆಯ ತೋಟಗಾರಿಕೆ ವಿಭಾಗವು ಉದ್ಯಾನಗಳ ನಿರ್ವಹಣೆ ಮಾಡಬೇಕು. ಆದರೆ, ಅದು ಸಂಪೂರ್ಣ ನಿಷ್ಕ್ರಿಯವಾಗಿದೆ. ತೋಟಗಾರಿಕೆ ವಿಭಾಗಕ್ಕೆ ನಿಯಮಾನುಸಾರ ಸಹಾಯಕ ತೋಟಗಾರಿಕೆ ನಿರ್ದೇಶಕರು ನೇಮಕವಾಗಿಲ್ಲ. ತೋಟಗಾರಿಕೆ ಬಗ್ಗೆ ಜ್ಞಾನವಿಲ್ಲದ ಸಿವಿಲ್ ಕಾಮಗಾರಿ ನಡೆಸುವಂತಹವರನ್ನು ನೇಮಕ ಮಾಡಿದ್ದಾರೆ. ನಿಯಮಾನುಸಾರ ತೋಟಗಾರಿಕೆ ಬಗ್ಗೆ ಅನುಭವ ಇರುವಂತಹವರನ್ನು ನೇಮಿಸಬೇಕು. ಆದರೆ, ನಿಯಮ ಪಾಲನೆ ಮಾಡಿಲ್ಲ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.


ಉದ್ಯಾನಗಳಲ್ಲಿ ನಿಯಮಬಾಹಿರವಾಗಿ ಕಟ್ಟಡ ಕಾಮಗಾರಿ ನಡೆಸಲು ಅನುಕೂಲವಾಗಲೆಂದು ವಲಯ ಕಚೇರಿ ಸಿವಿಲ್ ಇಂಜಿನಿಯರ್‌ಗಳಿಗೆ ಈ ಜವಾಬ್ದಾರಿ ನೀಡಲಾಗಿದೆ. ಇವರಿಗೆ ತೋಟಗಾರಿಕೆ ಬಗ್ಗೆ ಅನುಭವವಿಲ್ಲ ಎಂದು ಆರೋಪಿಸಿದರು.


ಪಾಲಿಕೆ ವ್ಯಾಪ್ತಿಯ ಎಲ್ಲ ಉದ್ಯಾನಗಳು ಈ ತೋಟಗಾರಿಕಾ ವಿಭಾಗದ ವ್ಯಾಪ್ತಿಗೆ ಬರುತ್ತವೆ. ಪ್ರತಿ ವಲಯ ಕಚೇರಿಗೆ ಒಬ್ಬ ತೋಟಗಾರಿಕೆ ನಿರೀಕ್ಷಕ ಇರಬೇಕು. ಆದರೆ, ಇಡೀ ಪಾಲಿಕೆಗೆ ಕೇವಲ ಇಬ್ಬರು ನಿರೀಕ್ಷಕರಿದ್ದಾರೆ. 90 ಕೆಲಸಗಾರರ ಬದಲಿಗೆ 27 ಜನರಿದ್ದಾರೆ. ಇದರಲ್ಲೂ ಸಾಕಷ್ಟು ಜನ ನಿವೃತ್ತಿಯಾಗಿದ್ದಾರೆ. ತೋಟಗಾರಿಕೆ ವಿಭಾಗದ ಕೆಲಸವನ್ನು ಸಂಪೂರ್ಣವಾಗಿ ನಿಯಮಬಾಹಿರವಾಗಿ ವಲಯ ಕಚೇರಿಗೆ ವರ್ಗಾಯಿಸಲಾಗಿದೆ. ಇದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ ಎಂದು ದೂರಿದರು.


ಉದ್ಯಾನದ ನಿರ್ವಹಣೆಯನ್ನು ವಲಯ ಕಚೇರಿ ಬದಲಿಗೆ ಹಿಂದಿನಂತೆಯೇ ಪಾಲಿಕೆ ತೋಟಗಾರಿಕೆ ವಿಭಾಗವೇ ನೋಡಿಕೊಳ್ಳಬೇಕು. ತೋಟಗಾರಿಕೆ ವಿಭಾಗ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಅರಣ್ಯ ಇಲಾಖೆಯು ಗಿಡಗಳನ್ನು ನೆಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಅರಣ್ಯ ಇಲಾಖೆಯಲ್ಲಿ ಗಿಡಗಳ ನರ್ಸರಿ ವ್ಯವಸ್ಥೆ ಇದ್ದು, ನಿರ್ವಹಣೆಯನ್ನು ಪಾಲಿಕೆ ತೋಟಗಾರಿಕೆ ವಿಭಾಗ, ನುರಿತ ಸಿಬ್ಬಂದಿ ನೋಡಿಕೊಳ್ಳಬೇಕು. ಇದರಲ್ಲಿ ಜನಪ್ರತಿನಿಧಿಗಳ ಹಸ್ತಕ್ಷೇಪವಿರಬಾರದು ಎಂದು ಒತ್ತಾಯಿಸಿದರು.


ಮೈಸೂರು ಗ್ರಾಹಕರ ಪರಿಷತ್‌ನ ಶೋಭನಾ, ಭಾಮಿ ಶೆಣೈ, ಲೀಲಾ ಶಿವಕುಮಾರ್, ಪರಶುರಾಮೇಗೌಡ, ಪರಿಸರ ಬಳಗದ ಕಿರಣ್, ಪರಿಸರವಾದಿ ಭಾನು ಮೋಹನ್, ಅರ್ಚನಾ ಇನ್ನಿತರರಿದ್ದರು.