ದಾಂಡೇಲಿ: ನಗರದ ಹಾರ್ನಬಿಲ್ ಭವನದಲ್ಲಿ ಫೆ. 17 ಮತ್ತು 18ರಂದು ಹಾರ್ನಬಿಲ್ ಹಬ್ಬ ನಡೆಯಲಿದೆ ಎಂದು ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ. ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ದಿನಗಳ ಕಾಲ ನಡೆಯುವ ಈ ಹಬ್ಬವನ್ನು ಫೆ. 17ರಂದು ಬೆಳಗ್ಗೆ 10 ಗಂಟೆಗೆ ನಗರಸಭೆ ಆವರಣದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಡಮಾಮಿ ನೃತ್ಯ, ಡೊಳ್ಳು ಕುಣಿತ, ಕಂಸಾಳೆ ಹಾಗೂ ವಿವಿಧ ಕಲಾ ತಂಡಗಳು ಹಾರ್ನಬಿಲ್ ಜಾಗೃತಿ ಜಾಥಾ ಮೆರವಣಿಗೆ ನಡೆಯಲಿವೆ. ಸಭಾ ಕಾರ್ಯಕ್ರಮದ ನಂತರ ಹಾರ್ನಬಿಲ್ ಪಕ್ಷಿ ಕುರಿತು ತಾಂತ್ರಿಕ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಸಂಜೆ ಸಫಾರಿ ಕಾರ್ಯಕ್ರಮ ನಂತರ ಹಾರ್ನಬಿಲ್ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಫೆ. 18ರಂದು ತಾಂತ್ರಿಕ ವಿಭಾಗದ ಎರಡು ಗೋಷ್ಠಿಗಳು ಮತ್ತು ಹಾರ್ನಬಿಲ್ ಪಕ್ಷಿ ಬಗ್ಗೆ ವಿಶೇಷ ಚರ್ಚೆ ಮತ್ತು ಸಮಾರೋಪ ಜರುಗಲಿದ್ದು, ಶಾಸಕ ಆರ್.ವಿ. ದೇಶಪಾಂಡೆ ಭಾಗವಹಿಸಲಿದ್ದಾರೆ ಎಂದರು.
ಎ.ಸಿ.ಎಫ್ ಸಂತೋಷ ಚವ್ಹಾಣ, ಆರ್.ಎಫ್.ಒ ಅಪ್ಪಾರಾವ್ ಕಲಶೆಟ್ಟಿ, ಸಂಗಮೇಶ ಪಾಟೀಲ ಹಾಗೂ ಕಚೇರಿ ಸಿಬ್ಬಂದಿ ಇದ್ದರು.