ಜಿಲ್ಲೆ

ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಹೊರಟ್ಟಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಹದಗೆಟ್ಟ ವ್ಯವಸ್ಥೆಯನ್ನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತು ಸರಿಪಡಿಸುವುದಾಗಿ ಹೇಳಿರುವ ವಿಧಾನ ಪರಿಷತ್​ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ತಮ್ಮ ರಾಜೀನಾಮೆ ಪತ್ರ ಸಹಿ ಮಾಡದೇ ಇರುವುದು ಎಂದರು.

ಈಗಾಗಲೇ ನನ್ನೊಂದಿಗೆ ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಮಾತನಾಡಿದ್ದಾರೆ. ಮಾ. 27ರಂದು ಬೆಂಗಳೂರಿನಲ್ಲಿ ಚಚಿರ್ಸಿ ಮುಂದಿನ ತೀರ್ಮಾನ ಮಾಡೋಣವೆಂದು ತಿಳಿಸಿದ್ದಾರೆ. ಹೀಗಾಗಿ, ರಾಜೀನಾಮೆಯ ನಿರ್ಧಾರ ಕೈಬಿಟ್ಟಿದ್ದಾಗಿ ಹೇಳಿದರು.

ರಾಜೀನಾಮೆಯ ತೀರ್ಮಾನಕ್ಕೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ವಿಧಾನ ಪರಿಷತ್​ ಸದಸ್ಯರು ಸಹ ರಾಜೀನಾಮೆ ನೀಡುವುದು ಬೇಡ ಎನ್ನುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ನನಗೆ ಸಿಗುತ್ತಿರುವ ಗೌರವದಿಂದಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಹೇಳಿದರು.

ಕಳೆದ 19, 20 ಹಾಗೂ 21ರಂದು ಸದನ ಮುಂದುವರೆಸಲಾಗದಂತೆ ಆಯಿತು. ಬಜೆಟ್​ ಮೇಲೆ ಮುಖ್ಯಮಂತ್ರಿ ಅವರು ಉತ್ತರ ನೀಡಿದ ನಂತರ ಹನಿಟ್ಯಾಪ್​ ಬಗ್ಗೆ ಉತ್ತರ ಕೊಡಿಸುವುದಾಗಿ ಹೇಳಿದ್ದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನೂ ಮುಖ್ಯಮಂತ್ರಿ ನೀಡಿದ್ದರು. ಆದರೂ, ಸದನದಲ್ಲಿ ಗದ್ದಲ ಆಯಿತು. ಅದೇ ಗದ್ದಲದಲ್ಲಿ ಕೆಲವು ಬಿಲ್​ ಪಾಸ್​ ಆದವು. ಚರ್ಚೆ ಆಗದೇ ಈ ರೀತಿ ಬಿಲ್​ ಪಾಸ್​ ಆಗಬಾರದು. ಅದು ಜನರಿಗೆ ಮೋಸ ಮಾಡಿದಂತೆ ಎಂದು ಕಳವಳ ವ್ಯಕ್ತಪಡಿಸಿದರು.

ನಾನು ಸದನದಲ್ಲಿ ಹಾಜರಿದ್ದರೂ ಈ ರೀತಿ ಮಾಡಿದ್ದು ಮನಸ್ಸಿಗೆ ಬೇಸರ ಮೂಡಿತು. ಹಲವು ನಾಯಕರು ರಾಜೀನಾಮೆ ನೀಡುವುದರಿಂದ ಎಲ್ಲವೂ ಬಗೆಹರಿಯುದಿಲ್ಲ. ಮಾ. 27ರ ನಂತರ ವಿಧಾನ ಪರಿಷತ್ತಿನ ಎಲ್ಲ ಸದಸ್ಯರಿಗೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಪತ್ರ ಕಳುಹಿಸುವೆ. ಯಾರೂ ನನ್ನ ಮಾತು ಮೀರುವುದಿಲ್ಲವೆಂಬ ನಂಬಿಕೆ ಇದೆ ಎಂದರು.

ವ್ಯವಸ್ಥೆ ಸರಿಪಡಿಸಲು ಏನಾದರೂ ಮಾಡಬೇಕು. ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.