ಕಳಸ: ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯವು ಧಾರ್ಮಿಕ ಆಚರಣೆ ಜತೆಗೆ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿ. ಇಲ್ಲಿನ ಧರ್ಮಕರ್ತರು 1992ರಿಂದಲೂ ಜಾರಿಗೆ ತಂದಿರುವ ವಿವಿಧ ಜನವರ ಯೋಜನೆಗಳಿಂದ ಸರ್ಕಾರದ ಹೊರ ಇಳಿಸಿದಂತಾಗುತ್ತದೆ ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು.
ಹೊರನಾಡಿನ ಲಲಿತಕಲಾ ಮಂಟಪದಲ್ಲಿ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಗಳಡಿ ತಟ್ಟೆ ಲೋಟಗಳ ವಿತರಣೆ, ಟಿಪ್ಪಣಿ ಪುಸ್ತಕಗಳ ವಿತರಣೆ, ಪ್ರತಿಭಾ ಪುರಸ್ಕಾರ, ಹೊರನಾಡು ಶಾಲೆಗೆ ವಾರ್ಷಿಕ ಶಾಲಾ ಶುಲ್ಕ, ಧ್ವನಿವರ್ಧಕ ಮತ್ತು ಪ್ರೊಜೆಕ್ಟರ್ ವಿತರಣೆ, ಕಲ್ಪವೃಕ್ಷ ಸಸಿಗಳ ವಿತರಣೆ, ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಹಲವಾರು ವರ್ಷಗಳಿಂದ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಶಾಲಾ ಮಕ್ಕಳಿಗೆ ಬಿಸಿಊಟ ನೀಡುವ ಯೋಜನೆಯನ್ನು 1958 ರಿಂದಲೇ ಶ್ರೀಕ್ಷೇತ್ರದಲ್ಲಿ ಆರಂಭಿಸಿದರುವುದು ಅನ್ನಪೂರ್ಣೇಶ್ವರಿದೇವಿಯ ಆಶೀರ್ವಾದ ಎಂದರೆ ತಪ್ಪಾಗಲಾರದು ಅಂದಿನಿಂದ ಇಂದಿನವರೆಗೂ ಈ ಯೋಜನೆ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳಿಗೆ ಬಿಸಿ ಊಟಕ್ಕೆ ಅನುಕೂಲವಾಗುವ ದೃಷ್ಠಿಯಿಂದ ತಟ್ಟೆ ಲೋಟಗಳನ್ನು ವಿತರಿಸಲಾಗುತ್ತಿದೆ. 1992 ರಿಂದ 2025 ರವರೆಗೆ ಧಾರ್ಮಿಕ ಯೋಜನೆ, ಧನ್ವಂತರಿ ಯೋಜನೆ, ಶೈಕ್ಷಣಿಕ ಯೋಜನೆ, ಸಾಮಾಜಿಕ ಯೋಜನೆ, ಸಾಂಸ್ಕೃತಿಕ ಯೋಜನೆ, ಸಾಮೂಹಿಕ ಉಪನಯನ, ಸಪ್ತಪದಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಆನಂದ ಜ್ಯೋತಿ ಯೋಜನೆ, ಅನ್ನದಾಸೋಹ ಯೋಜನೆಗಳಡಿ ಕ್ಷೇತ್ರದಿಂದ 20 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಮುಂದಿನ ದಿನಗಳಲ್ಲೂ ಸಹ ಯೋಜನೆಗಳನ್ನು ಹೆಚ್ಚಿನ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲಾಗುವುದು ಎಂದರು ತಿಳಿಸಿದರು.
ರೋಟರಿ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಪಾಲಾಕ್ಷ, ಹೊರನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುಪ್ರಸಾದ್ ಇದ್ದರು.