ಕಳಸ: ಶ್ರೀಕ್ಷೇತ್ರ ಹೊರನಾಡಿನಲ್ಲಿ ಶುಕ್ರವಾರ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ವರ್ಧಂತ್ಯುತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
1973ರ ಮೇ 5ರಂದು ನೂತನವಾಗಿ ನಿರ್ಮಿಸಿದ ಶಿಲಾಮಯ ದೇವಾಲಯದಲ್ಲಿ ಶ್ರೀ ಆದಿಶಕ್ತಿ ದೇವಿಯ ಪ್ರತಿಷ್ಠೆ, ಶ್ರೀ ಉದ್ಭವ ಗಣಪತಿ ಸ್ವಾಮಿ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಮರು ಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿತ್ತು.
ಆ ಪುಣ್ಯ ದಿನದ ವರ್ಧಂತ್ಯುತ್ಸವವನ್ನು ವೈಶಾಖ ಮಾಸ ಶುಕ್ಲ ಪಕ್ಷ ತದಿಗೆಯಂದು ಶ್ರೀ ಜಗನ್ಮಾತೆಯ ದಿವ್ಯ ಸನ್ನಿಧಿಯಲ್ಲಿ ವಿವಿಧ ಹೋಮಗಳು, ಪಾರಾಯಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಜಗನ್ಮಾತೆಗೆ ಅಭಿಷೇಕ, ಮಹಾಗಣಪತಿ ಹೋಮ, ಚಂಡಿಕಾ ಹೋಮ, ಲಲಿತಾ ಹೋಮ, ಲಕ್ಷ್ಮೀನಾರಾಯಣ ಹೃದಯ ಹೋಮ, ರಾಮತಾರಕ ಹೋಮ, ಅನ್ನಪೂರ್ಣ ಮೂಲಮಂತ್ರ ಹೋಮ, ಬಾಲತ್ರಿಪುರ ಸುಂದರಿ ಹೋಮ, ಗಾಯತ್ರಿ ಹೋಮ, ನವಗ್ರಹ ಹೋಮ, ರುದ್ರಹೋಮ, ವೇದ ಪಾರಾಯಣ ನಡೆಯಿತು.
ಹೋಮಗಳ ಪೂರ್ಣಾಹುತಿಯನ್ನು ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ದಂಪತಿ ನೆರವೇರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6.30ರಿಂದ ಉಡುಪಿಯ ಕುಂಜಿಬೆಟ್ಟಿನ ಶಾರದಾ ಹವ್ಯಾಸಿ ಕಲಾವಿದ ತಂಡದಿಂದ ಭೀಷ್ಮ ಪ್ರತಿಜ್ಞೆ-ಭೀಷ್ಮ ವಿಜಯ ಎಂಬ ಯಕ್ಷಗಾನ ನಡೆಯಿತು. ಸ್ಥಳೀಯರು ಸೇರಿದಂತೆ ರಾಜ್ಯ, ಹೊರರಾಜ್ಯಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದರು.