ಜಿಲ್ಲೆ

ರಸ್ತೆ ವಿಸ್ತರಣೆ ನಂತರವೇ ದುರಸ್ತಿ ಮಾಡಿ

ಕಳಸ: ಹೊರನಾಡು-ಬಲಿಗೆ-ಮೆಣಸಿನಹಾಡ್ಯ ರಸ್ತೆ ಅಸಮರ್ಪಕ ಕಾಮಗಾರಿ ಬಗ್ಗೆ ಅಸಮಾಧಾನಗೊಂಡ ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕಾರ ನಿರ್ಧಾರ ಕೈಗೊಂಡ ಬೆನ್ನಲ್ಲೇ ಬುಧವಾರ ಬಲಿಗೆಯಿಂದ ಕಾಲ್ನಡಿಗೆಯಲ್ಲಿ ಆಗಮಿಸಿ ಹೊರನಾಡು ಗ್ರಾಪಂಗೆ ಮನವಿ ಸಲ್ಲಿಸಿದರು.

ಅರ್ಕ ಕೀರ್ತಿ ಮಾತನಾಡಿ, ಕಳಸ ಗ್ರಾಪಂನ ಚಿಕ್ಕನಕುಡಿಗೆ, ದಂಟಗ, ತುರ, ಬಲಿಗೆ, ಕೆಸುವಿನಕೊಂಡ, ಕವನಹಳ್ಳ, ಮಣ್ಣಿನಪಾಲ್, ಹೊನ್ನೆಕಾಡು, ಮೆಣಸಿನಹಾಡ್ಯ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹೊರನಾಡಿನಿಂದ ಶೃಂಗೇರಿಗೆ ಬಲಿಗೆ- ಮೆಣಸಿನಹಾಡ್ಯ ಮುಖಾಂತರ ಹತ್ತಿರದ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊರನಾಡಿನಿಂದ ಪ್ರಾರಂಭಿಸಿ ಬಲಿಗೆವರೆಗಿನ 6.50 ಕಿಮೀ ರಸ್ತೆ ದುರಸ್ತಿಗೆ 2019ನೇ ಸಾಲಿನಲ್ಲಿ 8.50 ಕೋಟಿ ರೂ. ಅನುದಾನ ದೊರಕಿತ್ತು. ಈಗಾಗಲೇ 5 ಕಿಮೀ ರಸ್ತೆ ದುರಸ್ತಿಯಾಗಿದೆ. ಆದರೆ ಹೊರನಾಡಿನ ಪ್ರಾರಂಭಿಕ ಹಂತದ ಅಂದಾಜು ಒಂದೂವರೆ ಕಿಮೀ ರಸ್ತೆ ಇಕ್ಕಟ್ಟಾಗಿದ್ದು, ಅಗಲೀಕರಣಗೊಳಿಸದೆ ಕಾಮಗಾರಿ ನಡೆಸಲಾಗಿದೆ. ಈ ಬಗ್ಗೆ ಕಳೆದ ವರ್ಷ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ, ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿತ್ತು. ರಸ್ತೆ ವಿಸ್ತರಣೆ ಭರವಸೆ ನೀಡಿದ್ದರೂ ಕಾರ್ಯಗತವಾಗಿಲ್ಲ. ಹಾಗಾಗಿ ಚುನಾವಣೆ ಬಹಿಷ್ಕರಿಸುವ ತೀರ್ಮಾನ ಮಾಡಿದ್ದೇವೆ ಎಂದಿದ್ದಾರೆ.

ಗ್ರಾಮಸ್ಥರಾದ ಸುಕುಮಾರ್, ಮುತ್ತುರಾಜ್, ಪುರಂದರ, ಯಶೋಧರ, ಸನತ್​ಕುಮಾರ್, ರತ್ನವರ್ಮ, ಪ್ರಕಾಶ್, ಜಯಕೀರ್ತಿ ಇದ್ದರು.