ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಬುಧವಾರ ಬಿಳಿಗಿರಿ ರಂಗನಾಥಸ್ವಾಮಿ ದೇಗುಲದಲ್ಲಿ ನೀರಿಕ್ಷೆ ಸೇವೆ ಹಿನ್ನೆಲೆಯಲ್ಲಿ ದೇವರ ಮೂಲ ಮೂರ್ತಿಯ ಮುಂಭಾಗ ಕನ್ನಡಿ ಇಟ್ಟು ನವಧಾನ್ಯ, ಕಳಶ ಇಟ್ಟಿರುವುದು. 
ಜಿಲ್ಲೆ

ಬಿಳಿಗಿರಿ ರಂಗನಾಥಸ್ವಾಮಿಗೆ ನಿರೀಕ್ಷೆ ಸೇವೆ

ಯಳಂದೂರು: ತಾಲೂಕಿನ ಪುರಾಣ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇಗುಲದಲ್ಲಿ ಬುಧವಾರ ದೇವರಿಗೆ ನಿರೀಕ್ಷೆ ಸೇವೆ ಸಲ್ಲಿಸಲಾಯಿತು.

ದೊಡ್ಡ ಜಾತ್ರೆ ನಡೆದ 4ನೇ ದಿನ ಈ ಸೇವೆ ನಡೆಯುತ್ತದೆ. ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ರಂಗನಾಥನಾಯಕಿ ಅಮ್ಮನವರಿಗೆ ಮಹಾಭೀಷೇಕ ನೆರವೇರಿಸಿ ಆಯಾಸ ಪರಿಹಾರ ಅಲಂಕಾರ ಮಾಡಲಾಗುತ್ತದೆ. ಇದಾದ ಬಳಿದ ದೇವರಿಗೆ ಮೂರು ದಿನಗಳ ಕಾಲ ಯಾವುದೇ ಆಭರಣಗಳನ್ನು ಧರಿಸಿ ಪೂಜೆ ಮಾಡುವುದಿಲ್ಲ. ರಂಗನಾಥಸ್ವಾಮಿಯ ಮೂಲ ವಿಗ್ರಹ ಇರುವ ಎದುರಿಗೆ ದೊಡ್ಡ ಕನ್ನಡಿಯನ್ನು ಇಡಲಾಗುತ್ತದೆ.

ಇದರ ಮುಂಭಾಗ ನವಧಾನ್ಯಗಳ ತಟ್ಟೆ ಹಾಗೂ ಕಳಶವನ್ನು ಇಡಲಾಗುತ್ತದೆ. ದೇವರ ಬಿಂಬವನ್ನು ಮೊದಲು ಕನ್ನಡಿಯಲ್ಲಿ ದರ್ಶನ ಮಾಡಿ ನಂತರ ಮೂಲ ದೇವರ ದರ್ಶನ ಮಾಡುವ ವಾಡಿಕೆ ಇದೆ. ದೊಡ್ಡ ಜಾತ್ರೆ ರಂಗಪ್ಪನ ಮದುವೆ ಎಂಬ ಪ್ರತೀತಿ ಇದ್ದು ಇದಾದ ಬಳಿಕ ಉಯ್ಯಲೋತ್ಸವ ಸೇರಿದಂತೆ ಇತರ ಸೇವೆಗಳು ನಡೆಯುವ ವಾಡಿಕೆ ಇದೆ.

ದೇವರು ದಣಿದಿದ್ದಾರೆ ಎಂಬ ಕಾರಣಕ್ಕೆ ಇವರಿಗೆ ಮಹಾಭಿಷೇಕ ಮಾಡಿ ಮೂರು ದಿನಗಳ ಕಾಲ ವಿರಾಮ ನೀಡುವ ಪದ್ಧತಿ ಇದೆ ಎಂದು ಪ್ರಧಾನ ಅರ್ಚಕ ರವಿಕುಮಾರ್ ಮಾಹಿತಿ ನೀಡಿದರು.