ಜಿಲ್ಲೆ

ಜಿಬಿಎಗೆ ನಾಗರಿಕರ ಸಲಹೆ ಸೇರಿಸಲು ಭರವಸೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆ ಹಿನ್ನೆಲೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಬಿಬಿಎಂಪಿ ಆಯೋಜಿಸಿದ್ದ 3 ದಿನಗಳ ಅಹವಾಲು ಆಲಿಕೆ ಸಭೆಗೆ ಬುಧವಾರ ತೆರೆ ಕಂಡಿದೆ. ಪಾಲಿಕೆಯ ಎಂಟೂ ವಲಯಗಳಿಗೆ ಸಂಬಂಧಿಸಿ ಮೂರು ಕಡೆ ಆಯೋಜಿಸಿದ್ದ ಸಭೆಗಳಲ್ಲಿ ವ್ಯಕ್ತವಾದ ನಾಗರಿಕರ ಸಲಹೆಗಳನ್ನು ಪರಿಗಣಿಸುವ ಭರವಸೆ ನೀಡಲಾಯಿತು.

ಬಿಬಿಎಂಪಿ ವ್ಯಾಪ್ತಿಯ ಯಲಹಂಕದ ಹಾಗೂ ದಾಸರಹಳ್ಳಿ ವಲಯ ಸೇರಿ ಯಲಹಂಕ ಉಪನಗರದ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಯಲಹಂಕ ಹಾಗೂ ದಾಸರಹಳ್ಳಿ ವಲಯದ ಅಹವಾಲು ಆಲಿಕೆ ಸಭೆಯಲ್ಲಿ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ರಿಜ್ವಾನ್ ಅರ್ಷದ್ ಅವರು ಈ ವಾಗ್ದಾನ ನೀಡಿದರು. ವಿವಿಧ ಸಂಘ-ಸಂಸ್ಥೆಗಳು ಹಾಗೂ ನಾಗರಿಕರು ನೀಡಿರುವ ಸಲಹೆಗಳನ್ನು ಪರಾಮರ್ಶಿಸಿಯೇ ವಿಧೇಯಕದ ಅಂತಿಮ ಭಾಗಕ್ಕೆ ಸೇರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಹಾಲಿ ವಿಧೇಯಕದಲ್ಲಿರುವ ಅಂಶಗಳು ಅಂತಿಮವಾದುದ್ದಲ್ಲ, ಕರಡು ರೂಪದಲ್ಲಿ ಮಾತ್ರ ಇದೆ. ಅಹವಾಲು ಆಲಿಕೆ ಸಭೆಗಳಲ್ಲಿ ಹಲವಾರು ಹೊಸ ಅಂಶಗಳು ಕೇಳಿಬಂದಿವೆ. ಇವುಗಳನ್ನು ಮುಂಬರುವ ಸಮಿತಿಯ ಸಭೆಯಲ್ಲಿ ಚರ್ಚಿಸಿದ ನಂತರವೇ ಕರಡನ್ನು ಅಂತಿಮಗೊಳಿಸಲಾಗುವುದು. ಈ ವಿಚಾರದಲ್ಲಿ ಜನರಿಗೆ ಯಾವುದೇ ಸಂಶಯ ಬೇಡ ಎಂದು ತಿಳಿಸಿದರು.

ಒಬ್ಬ ಮೇಯರ್‌ರಿಂದ ಆಡಳಿತ ಕಷ್ಟ:

ಪ್ರಸ್ತುತ ಬೆಂಗಳೂರಿನ ಆಡಳಿತ ಯಾವ ರೀತಿ ನಡೆಯುತ್ತಿದೆ, ಈ ಆಡಳಿತದ ವಿನ್ಯಾಸ ಯಾವ ರೀತಿಯಿದೆ. ಇದರಿಂದ ನಾಗರಿಕರಿ ಎಷ್ಟರ ಮಟ್ಟಿಗೆ ಸಹಾಯವಾಗಿದೆ ಎಂಬುದರ ಬಗ್ಗೆ ಎಲ್ಲರೂ ಒಟ್ಟಿಗೆ ಸೇರಿ ಅವಲೋಕಿಸಬೇಕಿದೆ. ಮುಖ್ಯವಾಗಿ ಬೆಳೆಯುತ್ತಿರುವ ಮಹಾನಗರಕ್ಕೆ ಒಬ್ಬ ಮೇಯರ್ ಹಾಗೂ ಒಬ್ಬರೇ ಆಯುಕ್ತರಿಂದ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿಲ್ಲ. ಸ್ಥಳೀಯವಾಗಿಯೇ ನಗರ ಪಾಲಿಕೆಗಳನ್ನು ರಚಿಸಿದಲ್ಲಿ, ಅಲ್ಲಿನ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಚರ್ಚಿಸಿ ಇತ್ಯರ್ಥ ಪಡಿಸಬಹುದಾಗಿದೆ. ಇಂತಹ ಅಂಶಗಳು ಗ್ರೇಟರ್ ಬೆಂಗಳೂರು ವಿಧೇಯಕದಲ್ಲಿ ಇವೆ ಎಂದು ರಿಜ್ವಾನ್ ಅರ್ಷದ್ ವಿವರಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಲಯ ಆಯುಕ್ತರಾದ ಸತೀಶ್, ಕರೀಗೌಡ ಹಾಗೂ ಇನ್ನಿತರ ಅಧಿಕಾರಿಗಳಿದ್ದರು.