ಮಸರೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಷ್ಟಲಿಂಗ ಪೂಜೆಯಲ್ಲಿ ತಲ್ಲೀನರಾಗಿರುವ ಮಳಲಿ ಶ್ರೀಗಳು.  
ಜಿಲ್ಲೆ

ಬದುಕಿನಲ್ಲಿ ಭಯವಲ್ಲ ಭರವಸೆ ಮುಖ್ಯ

ರಿಪ್ಪನ್‌ಪೇಟೆ: ಬದುಕಿಗೆ ಭಯ ಮುಖ್ಯವಲ್ಲ, ಭರವಸೆ ಮುಖ್ಯ ಎಂದು ಮಳಲಿ ಮಠದ ಡಾ. ಶ್ರೀ ಗುರುನಾಗಭೂಷಣ ಸ್ವಾಮೀಜಿ ಹೇಳಿದರು.

ಸಮೀಪದ ಮಸರೂರು ಪೂಜಾರಗೊಪ್ಪದ ಶ್ರೀ ವೀಭದ್ರಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಇಷ್ಟಲಿಂಗ ಪೂಜೆ, ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಸರ್ವ ಅನಿಷ್ಟಗಳನ್ನು ಪರಿಹರಿಸಿ ಇಷ್ಟಾರ್ಥ ಪ್ರದಾಯಕವಾದ ಈ ಲಿಂಗಕ್ಕೆ ಇಷ್ಟಲಿಂಗವೆಂದು ಕರೆಯುತ್ತಾರೆ. ಸಾವಧಾನಪೂರ್ವಕವಾಗಿ ಶರೀರದ ಮೇಲೆ ಯಾವಾಗಲೂ ಇಷ್ಟಲಿಂಗ ಧರಿಸಬೇಕೆಂದು ತಿಳಿಸಿದರು. ಅನುಭವ ಹೆಚ್ಚಾದಷ್ಟು ಮನಸ್ಸುಗಟ್ಟಿಯಾಗುತ್ತದೆ. ಮನಸ್ಸು ಗಟ್ಟಿಯಾದಷ್ಟು ಆತ್ಮಸ್ಥೈರ್ಯ ಹೆಚ್ಚಾಗುತ್ತಿದೆ. ವ್ಯಕ್ತಿಯ ವ್ಯಕ್ತಿತ್ವ ಗಡಿಯಾರದಲ್ಲಿರುವ ಅಂಕಿ ಆಗಬೇಕೆ ವಿನಃ ಕಾಲಕ್ಕೆ ತಕ್ಕಂತೆ ಬದಲಾಗುವ ಮುಳ್ಳಾಗಬಾರದು ಎಂದರು.
ಎಂ.ಆರ್. ಶಾಂತವೀರಪ್ಪಗೌಡ, ಮುರುಗೇಶಪ್ಪ ಗೌಡ, ವರ್ತೇಶ್, ರುದ್ರಪ್ಪ ಮೂಗುಡ್ತಿ, ಅರ್ಚಕರಾದ ಶಿವಾನಂದಪ್ಪ, ರಾಚಪ್ಪ ಇತರರಿದ್ದರು.