ಬಾಗೂರು: ಬಣ್ಣ ಹಚ್ಚಿಕೊಳ್ಳುವ ಮೂಲಕ ಬದುಕಿನ ರಂಗನ್ನು ಇಮ್ಮಡಿಸಿಕೊಳ್ಳಿ ಎಂದು ದಸರಿಘಟ್ಟ ಆದಿಚುಂಚನಗಿರಿ ಶಾಖಾಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು.
ಸಮೀಪದ ದಸರಿಘಟ್ಟ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಚೌಡೇಶ್ವರಿ ದೇಗುಲದಲ್ಲಿ ಭಾನುವಾರ ಆಯೋಜಿಸಿದ್ದ ಹೋಳಿ ಹಬ್ಬ (ಹೋಳಿ ಹುಣ್ಣಿಮೆ) ವಿಶೇಷ ಪೂಜಾ ಕಾರ್ಯದಲ್ಲಿ ಅವರು ಆಶೀರ್ವಚನ ನೀಡಿದರು. ಹೋಳಿ ಎಂಬುದು ಜನಸಾಮಾನ್ಯರ ಹಬ್ಬ. ಪರಸ್ಪರ ಬಣ್ಣ ಹಚ್ಚಿ ಸಂತಸ ಪಡಬೇಕು. ಫಾಲ್ಗುಣ ಮಾಸದಲ್ಲಿ ಹೊಸತನ ಬರಬೇಕು. ಹಿಂದಿನ ದ್ವೇಷ ಅಸೂಯೆ ಮರೆತು ಎಲ್ಲರೂ ಒಂದಾಗಿ ಆತ್ಮೀಯತೆಯನ್ನು ವೃದ್ಧಿಸಿಕೊಳ್ಳಬೇಕು. ಋತುಗಳ ರಾಜ ವಸಂತನಾಗಮನ ಎಲ್ಲರ ಬಾಳಿಗೆ ಹೊಸ ಚೈತನ್ಯ ತುಂಬಬೇಕು ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ. ಶಿವಾನಂದ, ಕಿರುತೆರೆ ನಟರಾದ ಸಂಜು ತುಮಕೂರು, ದಯಾನಂದ ಸಾಗರ, ಉದ್ಯಮಿ ಎಂ.ಎ. ಹರೀಶ, ಮುಖಂಡರಾದ ಶಿವಕುಮಾರ, ಬಸವರಾಜು ಇತರರು ಹಾಜರಿದ್ದರು.