ಸಾಂದರ್ಭಿಕ ಚಿತ್ರ 
ಜಿಲ್ಲೆ

ಅಂತರ ರಾಜ್ಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಕೊಕ್ಕೆ..!

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ಸರ್ಕಾರ ಘೋಷಿಸಿರುವ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಲಾಭ ಗಡಿ ಭಾಗದಲ್ಲಿ ವಾಸಿಸುವ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆಯದಿರುವುದು ಬಸ್ ನಿರ್ವಾಹಕರು ಹಾಗೂ ಮಹಿಳೆಯರ ವಾದ-ವಿವಾದಕ್ಕೆ ಕಾರಣವಾಗಿದೆ.

ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರ ಭಾಗಕ್ಕೆ ತೆರಳುವ ಬಸ್‌ಗಳಲ್ಲಿ ‘ಅಂತರರಾಜ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ’ ಎಂದು ಬೋರ್ಡ್ ಅಂಟಿಸಿದ್ದು, ಹಲವು ಮಹಿಳೆಯರ ಆಕ್ರೋಶಕ್ಕೆ ಕಾರಣವಾಯಿತು. ಇದರ ಜತೆ ಕೆಲ ಬಸ್ ಚಾಲಕರು ಗಡಿಭಾಗದ ಗ್ರಾಮಗಳಲ್ಲಿ ಬಸ್ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು ಸಹ ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು.

ಅಂತಾರಾಜ್ಯಕ್ಕೆ ಹೋಗುವ ಬೋರ್ಡ್ ಹೊಂದಿರುವ ಬಸ್‌ಗಳಲ್ಲಿ ಉಚಿತ ಪ್ರಯಾಣವಿಲ್ಲ. ಮುಖ್ಯವಾಗಿ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಚಡಚಣ ತಾಲೂಕಿನ ಗಡಿಭಾಗದವರಿಗೆ ಜತೆಗೆ ಝಳಕಿ, ಧೂಳಖೇಡ, ಚಡಚಣ ಮಾರ್ಗವಾಗಿ ಶಿರಾಡೋಣ ಸೇರಿದಂತೆ ವಿವಿಧ ಗ್ರಾಮಗಳಿಗೆ ಸರ್ಕಾರ ಈ ಸೌಲಭ್ಯ ನೀಡುತ್ತಿಲ್ಲ.

ಸರ್ಕಾರ ಕರ್ನಾಟಕದಲ್ಲಿ ಸಂಚರಿಸಲು ಮಹಿಳೆಯರಿಗೆ ಉಚಿತ ಅವಕಾಶ ಮಾಡಿಕೊಟ್ಟಿದ್ದರೂ, ಹೀಗೇಕೆ ನೀವು ಬೋರ್ಡ್ ಹಾಕಿದ್ದೀರಿ. ಕರ್ನಾಟಕದ ಗಡಿಯವರೆಗೂ ನಮಗೆ ಉಚಿತ ಪ್ರಯಾಣಕ್ಕೆ ಅವಕಾಶ ಇದ್ದೇ ಇದೆ. ತದನಂತರ ನಾವು ಅಲ್ಲಿಂದ ಮಹಾರಾಷ್ಟ್ರ ಭಾಗಕ್ಕೆ ಟಿಕೆಟ್ ತೆಗೆದುಕೊಳ್ಳುತ್ತೇವೆ ಎಂದು ವಾದಕ್ಕೆ ಬಂದರು. ಆದರೆ ಇದನ್ನು ಒಪ್ಪದ ನಿರ್ವಾಹಕರು ಅಂತಾರಾಜ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸೌಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯಪುರ ಜಿಲ್ಲೆಯಿಂದ ಸೋಲಾಪುರಗೆ ಹೋಗುವ ಅಂತರ ರಾಜ್ಯ ಬಸ್‌ಗಳ ಸಂಖ್ಯೆಯೇ ನಿತ್ಯ 110-120ರಷ್ಟು ಇದೆ. ಗಡಿಭಾಗದ ಜನ ಸೋಲಾಪುರ ಸಮೀಪ ಇರುವ ಕಾರಣ ವ್ಯಾಪಾರ ವಹಿವಾಟುಗಳಿಗೆ ಮಹಾರಾಷ್ಟ್ರಕ್ಕೆ ಹೋಗುತ್ತಾರೆ. ಅಂಥ ಮಹಿಳೆಯರಿಗೆ ಈಗ ನಿರಾಸೆಯಾಗಿದೆ.

ನಗರ ಸಾರಿಗೆ ಸಹ ಪುಲ್

ವಿಜಯಪುರ ನಗರದ ವಿವಿಧೆಡೆ ಸಂಚರಿಸುವ ನಗರ ಸಾರಿಗೆ ಬಸ್‌ಗಳು ಸಹ ಮಹಿಳೆಯರಿಂದ ಪುಲ್ ಆಗಿದ್ದು, ರೈಲ್ವೆ ಸ್ಟೇಷನ್, ರಾಮನಗರ, ಇಬ್ರಾಹಿಂಪುರ ಸೇರಿದಂತೆ ಹಲವು ಕಡೆಗಳಲ್ಲಿ ಸಂಚರಿಸಲು ಮಹಿಳೆಯರು ಮುಗಿಬಿದ್ದರು. ಕೆಲವು ಬಸ್‌ಗಳಲ್ಲಿ ನೂಕುನುಗ್ಗಲು ಆಯಿತು. ಸೀಟು ಹಿಡಿಯಲು ಮಹಿಳೆಯರು ಮಕ್ಕಳನ್ನು ಕಿಟಕಿ ಮೂಲಕ ಕಳುಹಿಸಿ ಸೀಟು ಹಿಡಿಯುವುದು ಕಂಡುಬಂತು.

ಬಸ್‌ಗೆ ಪೂಜೆ : ಶಕ್ತಿ ಯೋಜನೆಗಾಗಿ ಮಹಿಳೆಯರು ದೇವರಹಿಪ್ಪರಗಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ಬಸ್‌ಗೆ ಪೂಜೆ ಸಲ್ಲಿಸಿ, ಉಚಿತ ಪ್ರಯಾಣಕ್ಕೆ ಚಾಲನೆ ನೀಡಿದ್ದು, ವಿಶೇಷವಾಗಿತ್ತು.

ದಿನಾಲು ಹೋಗುವ ಬಸ್ ಬೆಳಗಾವಿ ಜಿಲ್ಲೆಯ ಕಾಗವಾಡಕ್ಕೆ ನಿಲ್ಲಿಸಲಾಗುತ್ತಿತ್ತು. ಆದರೆ ಇಂದು ಕೇಳಿದರೆ ಅಂತರರಾಜ್ಯ ಬಸ್ ನಿಲ್ಲಿಸುವುದಿಲ್ಲ. ಅದು ನೇರ ಮಹಾರಾಷ್ಟ್ರ ಗಡಿ ಭಾಗಕ್ಕೆ ಹೋಗುತ್ತದೆ ಎಂದು ಹೇಳುತ್ತಿದ್ದಾರೆ. ಈಗ ನಾನು ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಬೇಕಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದ್ದು ಒಳ್ಳೆಯದ್ದು, ಆದರೆ ನಮ್ಮಂತವರಿಗೆ ಏನು ಲಾಭ ಇಲ್ಲ.ಭೀಮವ್ವ ಸಾರವಾಡ ವೃದ್ಧ ಮಹಿಳೆ
ಸರ್ಕಾರ ಮಹಿಳೆಯರಿಗೆ ಉಚಿತ ಪ್ರಮಾಣ ನೀಡಿರುವುದು ಒಳ್ಳೆಯದು. ಆದರೆ ಅದು ಎಲ್ಲರಿಗೂ ತಲುಪಬೇಕು. ಗಡಿಭಾಗದ ಗ್ರಾಮಗಳಲ್ಲಿ ಅಂತರರಾಜ್ಯ ಬಸ್‌ಗಳು ನಿಲ್ಲಿಸಬೇಕು. ಆಗ ನಮಗೂ ಉಪಯೋಗವಾಗುತ್ತದೆ. ಮಹಾರಾಷ್ಟ್ರಕ್ಕೆ ಹೋಗುವ ಬಸ್‌ಗಳು ಜಾಸ್ತಿ ಇವೆ. ನಾವು ದುಡ್ಡುಕೊಟ್ಟು ಹೋಗಬೇಕಾಗಿದೆ. ಲಕ್ಷ್ಮೀಬಾಯಿ, ಕಾಗವಾಡ ನಿವಾಸಿ
ಅಂತರ ರಾಜ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವಿಲ್ಲ. ಹೀಗಾಗಿ ನಾವು ಲಾತೂರ, ಸೋಲಾಪುರ ವಿಜಯಪುರ ಮಾರ್ಗವಾಗಿ ಖಾನಾಪುರಕ್ಕೆ ಹೋಗುವ ಬಸ್‌ನಲ್ಲಿ ಈ ಸೌಲಭ್ಯವಿಲ್ಲ. ಈ ಕಾರಣಕ್ಕೆ ನಮ್ಮ ಬಸ್ ಮುಂದೆ ಉಚಿತ ಪ್ರಯಾಣವಿಲ್ಲವೆಂದು ಬೋರ್ಡ್ ಹಾಕಿದ್ದೇವೆ. ಆದರೆ ಹಲವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.ಸಿದ್ದರೆಡ್ಡಿ, ಅಂತರಾಜ್ಯ ಬಸ್ ನಿರ್ವಾಹಕ