ಜಿಲ್ಲೆ

ಡಿಎಸ್‌ಎಸ್‌ನಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಸನ್ಮಾನ

ಆದರ್ಶ್. ಎಂ.ಕೆ.

ಮಡಿಕೇರಿ: ೨೦೨೩-೨೪ನೇ ಸಾಲಿನಲ್ಲಿ ಕಡಗದಾಳು ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಶೇ.೧೦೦ ರಷ್ಟು ಫಲಿತಾಂಶ ಬರಲು ಕಾರಣರಾದ ಶಿಕ್ಷಕರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.


ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕರು ಟಿ.ಆರ್.ವಾಸುದೇವ್, ಪ್ರಸ್ತುತ ದಿನಗಳಲ್ಲಿ ಶಿಕ್ಷಕರಲ್ಲಿ ದೇವರನ್ನು ಕಾಣುತ್ತಿದ್ದೇವೆ. ಶಿಕ್ಷಕರನ್ನು ಗೌರವಿಸಿದರೆ ಎಲ್ಲ ಕೆಲಸ ಕಾರ್ಯಗಳು ನೆರವೇರುತ್ತದೆ ಎಂದರು.


ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದು, ಉತ್ತಮವಾಗಿ ಓದಿ ಶಾಲೆಗೆ ಒಳ್ಳೆಯ ಹೆಸರು ತರಬೇಕು ಮತ್ತು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.


ಸಂಘಟನೆಯ ಜಿಲ್ಲಾ ಸಂಚಾಲ ಎಚ್.ಎಲ್.ದಿವಾಕರ್ ಮಾತನಾಡಿ, ಕೊಡಗಿನ ಎಲ್ಲಾ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಶೇ.೧೦೦ರಷ್ಟು ಫಲಿತಾಂಶ ಬರಬೇಕು ಎಂಬ ಕಾರಣಕ್ಕಾಗಿ ಸಂಘಟನೆಯ ವತಿಯಿಂದ ಸುಮಾರು ೧೦ ವರ್ಷಗಳಿಂದ ಉತ್ತಮ ಫಲಿತಾಂಶ ಬಂದ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರನ್ನು ಹಾಗೂ ಉಪನ್ಯಾಸಕರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಪ್ರಸ್ತುತ ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.


ಸಮಾಜ ಸೇವಕ ಉಣ್ಣಿಕೃಷ್ಣ ಮಾತನಾಡಿ, ಸಂಘಟನೆ ವತಿಯಿಂದ ಉತ್ತಮ ಕಾರ್ಯಕ್ರಮ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು ಸಂಘಟನೆಗಳು ಸ್ಪಂದಿಸುವಂತಾಗಬೇಕು ಎಂದರು.


ರಾಜರಾಜೇಶ್ವರಿ ಶೋ ರೂಂನ ಮಾಲೀಕ ಕಿರಣ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಬುದ್ದಿವಂತರು, ಹಲವು ಸಮಸ್ಯೆಗಳ ನಡುವೆಯೂ ಉತ್ತಮ ಅಂಕ ಪಡೆಯುವುದು ಶ್ಲಾಘನೀಯ ಎಂದರು.


ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಸಿರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಭವತಿ, ಕಡಗದಾಳು ಗ್ರಾ.ಪಂ ಅಧ್ಯಕ್ಷ ಭರತಿ, ಅಭಿವೃದ್ಧಿ ಅಧಿಕಾರಿ ಅನಿತ, ಮೊದೂರು ತೋಟದ ಮಾಲೀಕ ತಿಮ್ಮಯ್ಯ ಹಾಜರಿದ್ದರು.