ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಶಾಲಾ ಕಾಲೇಜುಗಳಲ್ಲಿ ನಡೆಯುವ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡಾಗ ಸುಪ್ತ ಪ್ರತಿಭೆಗಳು ಹೊರಹೊಮ್ಮುತ್ತವೆ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುಬ್ರಹ್ಮಣ್ಯ ಭಟ್ ಹೇಳಿದರು.
ಸಜೀಪ ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿವಿಧ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಕಳೆದ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲೆ ಡಾ.ಎನ್.ಎಸ್.ಜೈರಾಭಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ್, ಸದಸ್ಯರಾದ ವಿಶ್ವನಾಥ ಕೊಟ್ಟಾರಿ, ನಿಕಟಪೂರ್ವ ಪ್ರಾಂಶುಪಾಲ ಸುರೇಶ್ ಬಿ.ಐತಾಳ್ ಶುಭ ಹಾರೈಸಿದರು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಾದ ಅಸ್ಪಿಯಾ ಮತ್ತು ಆಯಿಷತ್ ಮುಬೀನಾ ಬಾನು ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಉಪನ್ಯಾಸಕರಾದ ಬಾಲಕೃಷ್ಣ ನಾಯ್ಕ ಕೆ.ಬೆಳ್ಳಾರೆ, ಶೋಭಾ, ಸಿಂಧೂಜಾ, ವೇದಾವತಿ, ಕಚೇರಿ ಸಿಬ್ಬಂದಿ ಲತಾ ಮತ್ತು ಸಂಜೀವ, ಪಾಲಕರಾದ ಅಬ್ದುಲ್ ಬಶೀರ್, ಸಾರಮ್ಮ ಇದ್ದರು. ಸ್ಫೂರ್ತಿ ಸ್ವಾಗತಿಸಿದರು. ಗಾಯತ್ರಿ ನಿರೂಪಿಸಿದರು. ಬಾಲಕೃಷ್ಣ ಎನ್.ವಿ. ವಂದಿಸಿದರು.