ರಾಷ್ಟ್ರಮಟ್ಟದ ಶೈಕ್ಷಣಿಕ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ್ ದಡದಪುರ ಅವರನ್ನು ಶ್ರೀರಂಗಪಟ್ಟಣದ ಪ್ರವಾಸಿ ಮಂದಿರಲ್ಲಿ ಸನ್ಮಾನಿಸಲಾಯಿತು. ಬಿ.ಸಿ.ಶಿವಾನಂದಮೂರ್ತಿ, ಡಾ.ಸುಧಾಕರ್ ಹೊಸಹಳ್ಳಿ, ಬಿ.ಜಿ.ಕುಮಾರ್, ಡಾ.ಬಿ.ಟಿ.ರಜಿನಿಕಾಂತ್ ಇತರರು ಇದ್ದರು. 
ಜಿಲ್ಲೆ

ಆಧುನೀಕರಣದಿಂದ ಸಂಬಂಧಗಳ ಮೌಲ್ಯ ಕುಸಿತ

ನಾಗೇಶ ಎಸ್

ಶ್ರೀರಂಗಪಟ್ಟಣ: ಉನ್ನತ ಶಿಕ್ಷಣ ಪಡೆದ ವ್ಯಕ್ತಿಗಳು ಸ್ನೇಹ ಸಂಬಂಧಗಳನ್ನು ಗೌರವಿಸಿ ತಮ್ಮೊಡನೆ ಪ್ರತಿ ಬೆಳವಣಿಗೆಯಲ್ಲಿ ಕೊಂಡೊಯ್ಯುವ ಮೂಲಕ ಸಮಾಜದ ನಿಜ ಸಾಧಕರಾಗಿ ಹೊರಹೊಮ್ಮುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಷ್ಟ್ರಮಟ್ಟದ ಶೈಕ್ಷಣಿಕ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ್ ದಡದಪುರ ಅವರಿಗೆ ಇತ್ತೀಚೆಗೆ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವ ವ್ಯಕ್ತಿ ತಾನು ಉನ್ನತ ಶಿಕ್ಷಣ, ಸ್ಥಾನ ತಲುಪಿದ ಕೂಡಲೇ ಬೆಳೆದುಬಂದ ಹಾದಿ, ಬೆಳೆಯಲು ನೆರವಾದವರು, ನೆರಳಾದ ಪರಿಸರವನ್ನು ಮರೆಯುತ್ತಾನೋ ಆತ ಎಂದಿಗೂ ಸಾಧಕ ಎನಿಸಿಕೊಳ್ಳುವುದಿಲ್ಲ. ಪ್ರಚಲಿತ ವಾಸ್ತವವೂ ಹಾಗೇ ನಿರ್ಮಾಣವಾಗಿದ್ದು, ಜಾಗತೀಕರಣ ಮತ್ತು ಆಧುನೀಕರಣದ ಒಲವಿನಲ್ಲಿ ಸಂಬಂಧಗಳ ಮೌಲ್ಯ ಕುಸಿಯುತ್ತಿದೆ. ಇಂತಹ ಪರಿಸ್ಥಿತಿ ನಡುವೆಯೂ ಚಂದ್ರಶೇಖರ್ ದಡದಪುರ ಶಿಕ್ಷಣ ಹಾಗೂ ವ್ಯವಹಾರಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ತಾನೋರ್ವ ಸಾಧಕನೆಂಬುದನ್ನು ತಲೆಯಲ್ಲಿಟ್ಟುಕೊಳ್ಳದೆ ತನ್ನ ಸ್ನೇಹಿತರು, ಪ್ರೀತಿ ಪಾತ್ರರಿಗೂ ಪರೋಪಕಾರಿಯಂತೆ ನೆರವಾಗಿದ್ದಾರೆ. ತನ್ನೊಂದಿಗೆ ಅವರ ಬೆಳವಣಿಗೆಯನ್ನೂ ಕಂಡ ನಿಜ ಸಾಧಕರಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗಾಗಿ ಕಟ್ಟಿದ ಶಿಕ್ಷಣ ಸಂಸ್ಥೆ ಮೂಲಕ ಉತ್ತಮ ತರಬೇತಿ, ಪ್ರತಿಭಾನ್ವಿತರಿಗೆ ಉದ್ಯೋಗ ಹಾಗೂ ಶೈಕ್ಷಣಿಕ ಪ್ರಗತಿಯೊಂದಿಗೆ ಮಹತ್ತರ ಹೆಜ್ಜೆಯನ್ನಿಟ್ಟು ಮುಂಬೈನಲ್ಲಿ ನಡೆವ ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಕನ್ನಡಿಗನಾಗಿ, ಮಂಡ್ಯ ಜಿಲ್ಲೆಯ ಗ್ರಾಮೀಣ ಸಾಧಕನಾಗಿ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಸಂವಿಧಾನ ವಿಶ್ಲೇಷಕ ಹಾಗೂ ಸಮಿತಿ ಅಧ್ಯಕ್ಷ ಡಾ.ಸುಧಾಕರ್ ಹೊಸಹಳ್ಳಿ ಮಾತನಾಡಿ, ಚಂದ್ರಶೇಖರ್ ದಡದಪುರ ಜಿಲ್ಲೆಯ ಗ್ರಾಮೀಣ ಸರ್ಕಾರಿ ಶಾಲೆ-ಕಾಲೇಜುಗಳಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸ್ನೇಹದಿಂದ ಅವರ ಸ್ನೇಹ ಬಳಗವೆಲ್ಲ ಜೀವನದಲ್ಲಿ ಒಂದೊಂದು ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿದ್ದು, ಸುಸ್ಥಿರ ಬದುಕನ್ನು ನಿರ್ಮಿಸುವಲ್ಲಿ ಮಾರ್ಗದರ್ಶಕರಾಗಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್, ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಟಿ.ರಜನಿಕಾಂತ್, ಗೊರವಾಲೆ ಮನು, ಪ್ರಸನ್ನ, ಪ್ರಾಧ್ಯಾಪಕ ದೇವರಾಜೇಗೌಡ, ಅಡುಗೆ ಕಂಟ್ರಾಕ್ಟರ್ ರಾಜೇಶ್ ಇತರರು ಇದ್ದರು.