ಕುಶಾಲನಗರ: ದೇವಾಲಯ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಬರಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. 1980ರಲ್ಲಿ ಸಮಿತಿ ಅಧ್ಯಕ್ಷರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ವಸಂತಕುಮಾರ್ ಅವರ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದರು.
ಕುಶಾಲನಗರದ ಶ್ರೀ ಗಣಪತಿ ದೇವಸ್ಥಾನದ ಅಭಿವೃದ್ಧಿಗೆ ಸುದೀರ್ಘ 45 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಮಿತಿ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದ ವಿ.ಎನ್.ವಸಂತಕುಮಾರ್ ಅವರಿಗೆ ದೇವಸ್ಥಾನದ ನೂತನ ಆಡಳಿತ ಮಂಡಳಿ ವತಿಯಿಂದ ಕುಶಾಲನಗರದ ಮಾರುತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೌರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂತಹ ಕಾರ್ಯಗಳನ್ನು ನಡೆಸುವುದು ಕೇವಲ ಸಂಪತ್ತಿನಿಂದ ಮಾತ್ರವಲ್ಲದೆ ಶುದ್ಧ ಮನಸ್ಥಿತಿ ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಜಾತಶತ್ರು ಗುಣವುಳ್ಳ ಕಾರಣ ವಸಂತಕುಮಾರ್ ಅವರಿಂದ ಈ ಕಾರ್ಯ ಸಾಧ್ಯವಾಗಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು.
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ದೇವಾಲಯ ಕಟ್ಟುವುದು ಸುಲಭ, ದೇವಸ್ಥಾನ ಹಾಗೂ ದೇವರ ಕಾರ್ಯಗಳನ್ನು ಸುಸೂತ್ರ, ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಇಂತಹ ಒಂದು ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಕಳೆದ 45 ವರ್ಷಗಳಿಂದ ನಿಭಾಯಿಸಿಕೊಂಡು ಬಂದಿರುವುದು ಮಹತ್ಕಾರ್ಯ. ಇಂತಹ ಸೇವೆಯನ್ನು ಪರಿಗಣಿಸಿ ಊರಿನ ಸಂಘ ಸಂಸ್ಥೆಗಳು, ಗಣ್ಯರು ಅಭಿಮಾನದಿಂದ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅಭಿನಂದನೀಯ ಎಂದರು.
ದೇವಾಲಯ ಸಮಿತಿ ನಿರ್ದೇಶಕ ವಿ.ಪಿ.ಶಶಿಧರ್ ಮಾತನಾಡಿ, ಊರು ಹಾಗೂ ದೇವಾಲಯ ಮತ್ತಷ್ಟು ಅಭಿವೃದ್ಧಿಗೊಂಡು ಸಮೃದ್ಧಿ ಕಾಣಬೇಕಿದೆ. ಧರ್ಮ ಹಾಗೂ ಸಂಸ್ಕೃತಿ, ಸದಾ ನೆಲೆ ನಿಲ್ಲಲು ಸೇವೆ ಸಲ್ಲಿಸುವಂತಹ ವಾತಾವರಣ ವೃದ್ಧಿಸಬೇಕೆಂಬ ವಸಂತಕುಮಾರ್ ಅವರ ಆಶಯ ಈಡೇರಲಿ ಎಂದರು.
ಸಮಿತಿಯ ನೂತನ ಅಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿ, ದೇವಸ್ಥಾನದ ಇತಿಹಾಸ ಹಾಗೂ ವಿ.ಎನ್.ವಸಂತಕುಮಾರ್ ಅವರ ಕೊಡುಗೆ, ಸೇವೆಯ ಬಗ್ಗೆ ತಿಳಿಸಿದರು. ಸಮೃದ್ಧ ಕುಟುಂಬದಿಂದ ಬಂದ ವಸಂತಕುಮಾರ್ ಅವರು ದೇವರ ಸೇವೆಗೆ ತಮ್ಮನ್ನು ಪ್ರಾಮಾಣಿಕವಾಗಿ ಸಮರ್ಪಿಸಿಕೊಂಡಿದ್ದರು. ಸುಮಾರು 400 ವರ್ಷ ಇತಿಹಾಸ ಹೊಂದಿರುವ ಗಣಪತಿ ದೇವಾಲಯದ ಅಭಿವೃದ್ಧಿಗೆ ವಸಂತಕುಮಾರ್ ಅವರ ಕೊಡುಗೆ ಅನನ್ಯ ಎಂದು ತಿಳಿಸಿದರು.
ಸಮಿತಿ ಉಪಾಧ್ಯಕ್ಷ ಆರ್.ಬಾಬು, ನಿರ್ದೇಶಕ ಟಿ.ಆರ್.ಶರವಣಕುಮಾರ್, ಉದ್ಯಮಿ, ಎಸ್‌ಎಲ್‌ಎನ್ ಸಂಸ್ಥೆಯ ವಿಶ್ವನಾಥನ್ ಮಾತನಾಡಿದರು. ನಿವೃತ್ತರಾಗಿರುವ ಸಮಿತಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸಂಘಸಂಸ್ಥೆಗಳ ಪ್ರಮುಖರು ವಸಂತಕುಮಾರ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಮಿತಿ ಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ಖಜಾಂಚಿ ಎಸ್.ಕೆ.ಸತೀಶ್, ಸಹ ಕಾರ್ಯದರ್ಶಿ ಕೆ.ಎನ್.ದೇವರಾಜ್, ನಿರ್ದೇಶಕರಾದ ವಿ.ಡಿ.ಪುಂಡರೀಕಾಕ್ಷ, ಎಚ್.ಎಂ.ಚಂದ್ರು ಇದ್ದರು.