ಔರಾದ್: ಶಿಕ್ಷಣದಿಂದಲೇ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡು ಕಠಿಣ ಶ್ರಮದೊಂದಿಗೆ ಅಭ್ಯಾಸ ಮಾಡಬೇಕೆಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.
ಸಂತಪುರ ಅನುಭವ ಮಂಟಪ ಗುರುಕುಲ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಹಾಗೂ ಪಾಲಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧಾತ್ಮಕತೆ ಮನೆ ಮಾಡಿದೆ. ಹೀಗಾಗಿ ಕಠಿಣ ಮತ್ತು ನಿಯಮಿತ ಪ್ರಯತ್ನವಿಲ್ಲದೆ ವಿದ್ಯಾರ್ಥಿಗಳು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇಂದು ಹಿರಿಯರನ್ನು ದೂರವಿಡುವ ಪ್ರವೃತ್ತಿ ಎಲ್ಲೆಡೆ ಹೆಚ್ಚಾಗಿದೆ. ಮನೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವುದು ಪ್ರಮುಖ ಅಂಶವಾಗಿದೆ ಎಂದು ಹೇಳಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಎಲ್ಲ ಸಂಪತ್ತುಗಳಲ್ಲಿ ಶಿಕ್ಷಣದ ಸಂಪತ್ತು ಅತ್ಯಂತ ಅಗಾಧವಾಗಿದೆ. ಎಲ್ಲವನ್ನು ಕಳೆದುಕೊಳ್ಳಬಹುದು ಆದರೆ ತಲೆಯಲ್ಲಿರುವ ವಿದ್ಯೆ ಮಾತ್ರ ಎಂದಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಶಿಕ್ಷಣದಿಂದಲೇ ಎಲ್ಲವು ಸಾಧ್ಯ ಅನ್ನುವುದು ನಮ್ಮ ಅನುಭವ ಮಂಟಪ ಗುರುಕುಲ ಶಾಲೆ ಮಕ್ಕಳು ಸಾಬೀತು ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯ ಉತ್ತಮವಾಗಿ ರೂಪಿಸಿಕೊಂಡು ಕಲಿತ ಶಾಲೆ, ಹುಟ್ಟಿದ ಗ್ರಾಮ, ಜನ್ಮ ನೀಡಿದ ತಂದೆ-ತಾಯಿ, ಅಕ್ಷರ ಕಲಿಸಿದ ಗುರುಗಳಿಗೆ ಕೀರ್ತಿ ತರುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಪ್ರಮುಖರಾದ ಸಂಜುಕುಮಾರ ಜುಮ್ಮಾ, ಶಿವಕುಮಾರ ಹಿರೇಮಠ, ಮಾರುತಿ ಗಾದಗೆ, ನವೀಲಕುಮಾರ ಉತ್ಕಾರ, ಸಂಗಮೇಶ ಬ್ಯಾಳೆ, ತಾನಾಜಿ ಗಾಯಕವಾಡ, ಸಾಯಪ್ಪ ಕರಂಜೆ, ಅವಿನಾಶ, ರಾಜಕುಮಾರ, ವಿಜಯಕುಮಾರ ಪಾಟೀಲ್ ಇತರರಿದ್ದರು.
ಮೇ ೧೨ ಮತ್ತು ೧೫ರಂದು ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಬೆಳಗ್ಗೆ ೯ಕ್ಕೆ ಪಿಯುಸಿ ವಿಜ್ಞಾನ ವಿಷಯದ ಪ್ರವೇಶ ಪರೀಕ್ಷೆ ಜರುಗಲಿದೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ೧೦ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುವುದು.ಆದ್ದರಿಂದ ಹೆಚ್ಚಿನ ಮಕ್ಕಳು ಭಾಗವಹಿಸಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು.
| ಶ್ರೀ ಗುರುಬಸವ ಪಟ್ಟದ್ದೇವರು ಪೀಠಾಧಿಪತಿ ಹಿರೇಮಠ ಸಂಸ್ಥಾನ ಭಾಲ್ಕಿ