ಕಾರ್ಕಳ: ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಕಾರ್ಕಳ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜುಗಳ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ ಸಾಧಕರನ್ನು, ರಾಜ್ಯಮಟ್ಟದಲ್ಲಿ 10 ರೊಳಗಿನ ರ‌್ಯಾಂಕ್ ಗಳಿಸಿದ ಸಂಸ್ಥೆಯ ಒಟ್ಟು 29 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿಜ್ಞಾನ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ 4ನೇ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಕಾರ್ಕಳ ಜ್ಞಾನಸುಧಾದ ಆಸ್ತಿ ಎಸ್.ಶೆಟ್ಟಿ, 595 ಅಂಕ ಗಳಿಸಿ ರಾಜ್ಯಮಟ್ಟದಲ್ಲಿ 5ನೇ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನಿಗಳಾದ ಕಾರ್ಕಳ ಜ್ಞಾನಸುಧಾ ಶ್ರೀರಕ್ಷಾ ಆರ್.ನಾಯಕ್, ವಿಶ್ವಾಸ್ ಆತ್ರೇಯಾಸ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಅಪೂರ್ವ್ ವಿ.ಕುಮಾರ್ ಮತ್ತು ವಾಣಿಜ್ಯ ವಿಭಾಗದಲ್ಲಿ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನಿಗಳಾದ ಕಾರ್ಕಳ ಜ್ಞಾನಸುಧಾದ ಸಹನಾ ನಾಯಕ್ ಮತ್ತು ತನ್ವಿ ರಾವ್ ಹಾಗೂ ಇತರ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಟ್ರಸ್ಟಿ ಅನಿಲ್ ಕುಮಾರ್‌ಜೈನ್, ಕಾರ್ಕಳ ಜ್ಞಾನಸುಧಾ ಸಿಇಒ ದಿನೇಶ್ ಎಂ. ಕೊಡವೂರು, ಉಡುಪಿ ಜ್ಞಾನಸುಧಾ ಪ್ರಾಂಶುಪಾಲ ಸಂತೋಷ್ ಹಾಗೂ ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಸಾಧಕ ವಿದ್ಯಾರ್ಥಿಗಳ ಹೆತ್ತವರು ಹಾಗೂ ತ್ರಿವಿಕ್ರಮ ಕಿಣಿ ಹಾಗೂ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು. ಆಂಗ್ಲಭಾಷಾ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.