ಜಿಲ್ಲೆ

130 ಗುರುಗಳ ಸನ್ಮಾನ, ನಿವೃತ್ತ ಶಿಕ್ಷಕರ ಪಾದಪೂಜೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಇಲ್ಲಿನ ಕೆಎಲ್​ಇ ಸಂಸ್ಥೆಯ ಶ್ರೀಮತಿ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್​ನ 1996ರಿಂದ 2020ನೇ ಬ್ಯಾಚ್​ನ ಹಳೆಯ ವಿದ್ಯಾರ್ಥಿಗಳ ಸಂಘದಿಂದ ‘ಗುರುವಂದನಾ’-ಮರಳಿ ಕ್ಯಾಂಪಸ್​ಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.

ಪಾಲಿಟೆಕ್ನಿಕ್​ನಿಂದ ಬಿವಿಬಿ ಬಯೋಟೆಕ್ ಸಭಾಂಗಣದವರೆಗೆ ನಿವೃತ್ತ-ಹಾಲಿ ಗುರುಗಳನ್ನು ಪುಷ್ಪವೃಷ್ಟಿ, ವಾದ್ಯ ಮೇಳದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಸುಮಾರು 130 ಗುರುಗಳನ್ನು ಸನ್ಮಾನಿಸಿದರು. ನಿವೃತ್ತ ಶಿಕ್ಷಕರ ಪಾದಪೂಜೆ ನೆರವೇರಿಸಿದರು. ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಿಮಿತ್ತ ಸಂಗ್ರಹಿಸಿದ ಹಣದಲ್ಲಿ ಉಳಿದ ಹಣವನ್ನು ಸೇನೆ ಕಲ್ಯಾಣ ನಿಧಿಗೆ ನೀಡಿದರು. ವಿವಿಧೆಡೆಯಿಂದ ಆಗಮಿಸಿದ ನೂರಾರು ಹಳೇ ವಿದ್ಯಾರ್ಥಿಗಳು ಸಮಾರಂಭಕ್ಕೆ ಸಾಕ್ಷಿಯಾದರು.

ಹಳೇ ವಿದ್ಯಾರ್ಥಿ, ನಿರಾಣಿ ಗ್ರುಪ್​ನ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿ, ನಾವು ಕಲಿತ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಯೋಜಿಸಿರುವುದು ಸಂತಸ ವಿಚಾರ. ಹಳೇ ವಿದ್ಯಾರ್ಥಿಗಳ ಸಂಘದಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯ. ಈ ಕಾರ್ಯಕ್ಕೆ ನಿರಾಣಿ ಗ್ರುಪ್ ಕೈ ಜೋಡಿಸಲಿದೆ ಎಂದರು.

ಹಳೇ ವಿದ್ಯಾರ್ಥಿ ಹಾಗೂ ಡಿಆರ್​ಡಿಒ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಉಪ್ಪಾರ ಮಾತನಾಡಿ, ತಂತ್ರಜ್ಞಾನ ಜತೆಗೆ ಇಂದು ಕೌಶಲ ಬಹುಮುಖ್ಯವಾಗಿದೆ. ಹಿಂದಿನ ಹಾಗೂ ಇಂದಿನ ಪೈಪೋಟಿಯಲ್ಲಿ ಸಾಕಷ್ಟು ಅಂತರವಿದೆ. ಕೌಶಲಧಾರಿತ ಶಿಕ್ಷಣಕ್ಕೆ ಮಾತ್ರ ಮೌಲ್ಯವಿದೆ ಎಂದರು.

ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಯಾರೇ ಆಗಲಿ, ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಕಲಿತ ಕಾಲೇಜಿಗೆ, ಹುಟ್ಟಿದ ಊರಿಗೆ ಏನಾದರೂ ಕೊಡುಗೆ ನೀಡಬೇಕು ಎಂದರು. ನಿಖಿಲೇಶ ಕುಂದಗೋಳ ಮಾತನಾಡಿ, ಇಂಥ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಹೇಳಿದರು.

ಪ್ರಾಚಾರ್ಯ ವೀರೇಶ ಅಂಗಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಂ.ಆರ್. ಪಾಟೀಲ, ಶಿವಾನಂದ ದಂಡಾವತಿಮಠ, ಪ್ರವೀಣ ಕುಂದಗೋಳ, ಶ್ರೀನಿವಾಸ ಗೋದಿ, ಶ್ರೀಕಾಂತ ಸೊಗಲದ , ಸುಧೀರ ಹೊಸಮನಿ, ವಿಜಯಲಕ್ಷ್ಮೀ ವಿಭೂತಿ, ಅಂಜಲಿ ಗೊಬ್ಬಣ್ಣವರ, ವಿಜಯಲಕ್ಷ್ಮೀ ಪಟ್ಟಣ, ರೂಪ ಮುದುಗಲ, ಪ್ರೀತಿ ಎಸ್,, ವಾಣಿಶ್ರೀ ಡಿ. ಎನ್., ಸುಪ್ರಿತಾ, ವಿದ್ಯಾ ಕೊಪ್ಪಳ, ಸಂತೋಷ ಖೈರೆ, ದೀಪಕ ಉಗರಗೋಳ ಸೇರಿದಂತೆ ಇನ್ನಿತರರಿದ್ದರು.