ಜಿಲ್ಲೆ

ಹಿರಿಯ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಾಳೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡದ ಟುಟೋರಿಯಲ್​ ಅಸೋಸಿಯೇಷನ್​ ಹಾಗೂ ರಿಸಲ್ಟ್​ ಕನ್ಸಲ್ಟನ್ಸಿ ಸರ್ವಿಸ್ ವತಿಯಿಂದ ಇಲ್ಲಿನ ಆಲೂರು ವೆಂಕಟರಾವ್​ ಸಭಾಭವನದಲ್ಲಿ ಸೆ. 5ರಂದು ಸಂಜೆ 5 ಗಂಟೆಗೆ 80 ವರ್ಷದ ಮೆಲ್ಪಟ್ಟ ಹಿರಿಯ ಶಿಕ್ಷಕರಿಗೆ ಸನ್ಮಾನ ಮತ್ತು ಗುರು ಆಶೀರ್ವಾದ ಸಮಾರಂಭ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್​ ಅಧ್ಯಕ್ಷ ನಾಗೇಶ ಅಣ್ಣಿಗೇರಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ದಿನಾಚರಣೆ ನಿಮಿತ್ತ ಈ ಸಮಾರಂಭ ಏರ್ಪಡಿಸಲಾಗಿದೆ. ಹು-ಧಾ ಅವಳಿನಗರ ವ್ಯಾಪ್ತಿಯ ವಿವಿಧ ಪ್ರಾಥಮಿಕ, ಪ್ರೌಢಶಾಲೆಯ 80 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ಸನ್ಮಾನಿಸಲಾಗುವುದು. ಅವರು ನಿವೃತ್ತಿ ಹೊಂದಿದ 20-25 ವರ್ಷಗಳ ನಂತರ ಸನ್ಮಾನಿಸುವುದು ಒಂದು ವಿಶೇಷ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸುವರು. ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ.ಗುಡಸಿ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಧಾರವಾಡ ಟುಟೋರಿಯಲ್​ ಅಸೋಸಿಯೇಷನ್​ ಉದ್ಘಾಟನೆ ಹಾಗೂ ಶಿಕ್ಷಕ ಪ್ರೇರಣಾ ಕೇಂದ್ರ ಲೋಕಾರ್ಪಣೆ ನಡೆಯಲಿದೆ ಎಂದರು.
ಸುಧೀಂದ್ರ ದೇಶಪಾಂಡೆ, ವಿನಾಯಕ ಜೋಶಿ, ನಾಗರಾಜ ತಿಗಡಿ, ಇತರರು ಇದ್ದರು.