ವಿಜಯಪುರ ನಗರದಲ್ಲಿ ಸಾಹಿತಿ ಸಿದ್ಧರಾಮ ಬಿರಾದಾರ ಅವರನ್ನು ಸನ್ಮಾನಿಸಿ ಮುರುಗೇಶ ಸಂಗಮ ಮಾತನಾಡಿದರು. ಶಂಕರ ಬೈಚಬಾಳ, ಶಿವಲಿಂಗ ಕಾರಜೋಳ, ಬಸನಗೌಡ ಬಿರಾದಾರ ಮತ್ತಿತರರಿದ್ದಾರೆ.  
ಜಿಲ್ಲೆ

ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸನ್ಮಾನ

ವಿಜಯಪುರ: ಇವಣಗಿ ಗ್ರಾಮದಲ್ಲಿ ನಡೆಯುವ ಬಸವನಬಾಗೇವಾಡಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಸಿದ್ಧರಾಮ ಬಿರಾದಾರ ಅವರನ್ನು ಬಸವ ಜನ್ಮಭೂಮಿ ಪ್ರತಿಷ್ಠಾನ ಹಾಗೂ ಕನ್ನಡ ಪುಸ್ತಕ ಪರಿಷತ್ತಿನ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ನಗರದಲ್ಲಿರುವ ಸಾಹಿತಿ ಸಿದ್ಧರಾಮ ಬಿರಾದಾರ ಅವರ ಮನೆಗೆ ಗುರುವಾರ ಭೇಟಿ ನೀಡಿದ ಪದಾಧಿಕಾರಿಗಳು ಕನ್ನಡ ಧ್ವಜ ಹಾಕಿ ಸನ್ಮಾನಿಸಿದರು.

ಪ್ರತಿಷ್ಠಾನದ ಸಂಚಾಲಕ, ಸಾಹಿತಿ ಮುರುಗೇಶ ಸಂಗಮ ಮಾತನಾಡಿ, ಬಸವೇಶ್ವರರು ಜನಿಸಿ ಓಡಾಡಿದ ಬಸವನಬಾಗೇವಾಡಿಯ ನೆಲವೇ ಪಾವನ ಭೂಮಿ. ಈ ಪವಿತ್ರ ೇತ್ರಕ್ಕೆ ಸಮೀಪದ ಇವಣಗಿ ಗ್ರಾಮ ಒಂದು ಸುೇತ್ರ. ಇಂಥ ಪಾವನ ಪರಿಸರದಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಸ್ಥಾನ ಸಾಹಿತಿ ಸಿದ್ಧರಾಮ ಬಿರಾದಾರ ಅವರಿಗೆ ಒಲಿದು ಬಂದಿರುವುದು ಸಂತಸದ ಸಂಗತಿ ಎಂದರು.

ಮನಗೂಳಿ ಪಟ್ಟಣದ ನಿವಾಸಿಯಾಗಿರುವ ಬಿರಾದಾರ ಅವರು ಉಕ್ಕಲಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದು, ಸಾಹಿತ್ಯ ಕೃಷಿ ಮಾಡುತ್ತ ಖುಷಿಯಾಗಿದ್ದಾರೆ. ಇವರ 11 ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿದ್ದು ಹಿರಿಯ ಸಾಹಿತಿಗಳ ಮೆಚ್ಚುಗೆ ಪಡೆದಿವೆ ಎಂದರು.

ಸಾಹಿತಿ ಶಂಕರ ಬೈಚಬಾಳ, ಶಿವಲಿಂಗ ಕಾರಜೋಳ, ಬಸನಗೌಡ ಬಿರಾದಾರ, ಶ್ರೀಕಾಂತ ಮಂಗಾನವರ ಹಾಗೂ ಉದ್ಯಮಿ ವೀರೇಶ ಬಿರಾದಾರ ಮತ್ತಿತರರಿದ್ದರು.