ನಂಜನಗೂಡು: ಅತ್ಯುತ್ತಮ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಹೊಸವೀಡು ಹುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅತ್ಯುತ್ತಮ ಶಾಲೆ ಮತ್ತು ಪುಷ್ಠಿ ಗೌರವದೊಂದಿಗೆ ಒಂದು ಲಕ್ಷ ರೂ. ನಗದು ಪಡೆದುಕೊಂಡಿದೆ.
ಒಂದರಿಂದ ಐದನೇ ತರಗತಿವರೆಗಿನ ಈ ಶಾಲೆಯಲ್ಲಿ ಒಟ್ಟು 32 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಬ್ಬರು ಶಿಕ್ಷಕರು, ಹಾಗೂ ಇಬ್ಬರು ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಸಮಿತಿ (ಎಸ್‌ಡಿಎಂಸಿ) ಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪುಷ್ಠಿ ಕಾರ್ಯಕ್ರಮದಡಿ ಪ್ರಶಸ್ತಿ ನೀಡುತ್ತಿದೆ. ಅದರಂತೆ ಜಿಲ್ಲೆಯ 9 ಬ್ಲಾಕ್‌ಗಳಿಂದ ಒಂದೊಂದು ಶಾಲೆಯ ಎಸ್‌ಡಿಎಂಸಿಗೆ ಪುಷ್ಠಿ ಗೌರವ ದೊರೆತಿದೆ.
ಅತ್ಯುತ್ತಮ ಕಾರ್ಯ ನಿರ್ವಹಿಸುವ ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸಲು ಪುಷ್ಠಿ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. 2024-25 ನೇ ಸಾಲಿನಿಂದ ಪುಷ್ಠಿ ಕಾರ್ಯಕ್ರಮದಡಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಒಂದು ಲಕ್ಷ ರೂ. ನಗದನ್ನು ಬಹುಮಾನವಾಗಿ ನೀಡಲಾಗುತ್ತಿದೆ.
ಜಿಲ್ಲೆಯ ಒಂಬತ್ತು ಶಾಲೆಗಳು ಆಯ್ಕೆ: ಇಲಾಖೆಯಿಂದ ನೀಡುತ್ತಿರುವ ಪ್ರಶಸ್ತಿಗೆ ಒಟ್ಟು ಒಂಬತ್ತು ಬ್ಲಾಕ್‌ನಿಂದ ಒಂದೊಂದು ಶಾಲೆ ಆಯ್ಕೆಯಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಬೆಳಗನಹಳ್ಳಿ ಶಾಲೆ, ಹುಣಸೂರು ತಾಲೂಕಿನ ವಾರ್ಡ್ ನಂ. 16ರ ಸರ್ಕಾರಿ ಶಾಲೆ, ಕೆ.ಆರ್.ನಗರದ ಸಿದ್ದಾಪುರ ಶಾಲೆ, ಮೈಸೂರು ಉತ್ತರದ ಕುಂಬಾರ ಕೊಪ್ಪಲು ಶಾಲೆ, ಮೈಸೂರು ಗ್ರಾಮಾಂತರದ ಕಡಕೋಳ ಸರ್ಕಾರಿ ಶಾಲೆ, ಮೈಸೂರು ದಕ್ಷಿಣದಿಂದ ಅಶೋಕಪುರಂ ಶಾಲೆ, ನಂಜನಗೂಡಿನಿಂದ ಹೊಸವೀಡು ಹುಂಡಿ ಸರ್ಕಾರಿ ಶಾಲೆ, ಪಿರಿಯಾಪಟ್ಟಣದಿಂದ ದೊಡ್ಡ ಹರವೆ ಸರ್ಕಾರಿ ಶಾಲೆ, ತಿ.ನರಸೀಪುರ ತಾಲೂಕನ ಹೆಗ್ಗೂರು ಶಾಲೆಗೆ ಪ್ರಶಸ್ತಿ ಬಂದಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?: ಪುಷ್ಠಿ ಕಾರ್ಯಕ್ರಮದಡಿ ಅತ್ಯುತ್ತಮ ಶಾಲಾಭಿವೃದ್ಧಿ ಸಮಿತಿ ಆಯ್ಕೆ ಮಾಡಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಿಂದ ಅರ್ಜಿಗಳು ಸಲ್ಲಿಕೆ ಆಗಿದ್ದವು. ಬಳಿಕ ಮೂರು ಹಂತದಲ್ಲಿ ಬಿಆರ್‌ಸಿ ಮತ್ತು ಸಿ ಆರ್‌ಸಿ ಪರಿಶೀಲನೆ ಮಾಡಿದರು. ನಂತರ ತಾಲೂಕು ಮಟ್ಟದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಮಟ್ಟದಲ್ಲಿ ಡಯಟ್ ಪ್ರಾಂಶುಪಾಲರು ಮೌಲ್ಯಮಾಪನ ಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಿದ್ದರು. ಅಂತಿಮವಾಗಿ ಪ್ರತಿ ಬ್ಲಾಕ್‌ನಿಂದ ಒಂದು ಸರ್ಕಾರಿ ಶಾಲೆಗೆ ಪುಷ್ಠಿ ಪ್ರಶಸ್ತಿ ಹೆಸರು ಘೋಷಿಸಲಾಯಿತು.
ಬಿಸಿ ಊಟದ ಗುಣಮಟ್ಟ, ಗೈರು ಹಾಜರಾದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು, ಶೈಕ್ಷಣಿಕ ಪ್ರವಾಸ, ಗುಣಮಟ್ಟದ ಶಿಕ್ಷಣ, ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುವುದು ಹಾಗೂ ಪಾಲ್ಗೊಳ್ಳುವಂತೆ ಮಾಡುವುದು, ಶಾಲೆಗಳಲ್ಲಿ ಪಾಲಕರ ಸಭೆ ನಡೆಸುವುದು, ಸಮುದಾಯದತ್ತ ಶಾಲೆಗಳಿಗೆ ಮಕ್ಕಳನ್ನು ಭೇಟಿ ಕೊಡಿಸುವುದು, ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವುದು, ಪ್ರತಿಭಾ ಕಾರಂಜಿ, ಕ್ರೀಡಾ ಚಟುವಟಿಕೆ, ಶಾಲೆ ವಾತಾವರಣ ಉತ್ತಮಗೊಳಿಸುವುದು. ಹಳೆಯ ವಿದ್ಯಾರ್ಥಿಗಳ ನೆರವಿನಿಂದ ಶಾಲೆಯನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಮಾನದಂಡಗಳನ್ನು ಇಲ್ಲಿ ಅನುಸರಿಸಲಾಗಿದೆ.
ಹಣ ಬಳಕೆ ಹೇಗೆ: ಪುಷ್ಠಿ ಕಾರ್ಯಕ್ರಮದಡಿ ಆಯ್ಕೆಯಾಗಿರುವ ಶಾಲೆಯ ಎಸ್‌ಡಿಎಂಸಿ ಖಾತೆಗೆ 1 ಲಕ್ಷ ರೂ. ಸರ್ಕಾರದಿಂದ ಜಮೆಯಾಗಲಿದೆ. ಈ ಹಣವನ್ನು ಶಾಲೆಯ ಶೈಕ್ಷಣಿಕ ಚಟುವಟಿಕೆ, ಗ್ರಂಥಾಲಯ, ಕಂಪ್ಯೂಟರ್, ಆಟದ ಸಾಮಗ್ರಿ, ಪ್ರಯೋಗಾಲಯ, ಕಲಿಕಾ ಮೇಳ, ಇಂಟರ್‌ನೆಟ್, ಸಿಸಿ ಕ್ಯಾಮರಾ ಸೇರಿದಂತೆ ಹಲವು ಚಟುವಟಿಕೆಗಳಿಗೆ ಬಳಸಿಕೊಳ್ಳುವುದರ ಜತೆಗೆ ಶಾಲೆಯ ದಾಖಲಾತಿಯಲ್ಲಿ ನಮೂದಿಸಿರಬೇಕು.
ಪ್ರಾಥಮಿಕ ಮತ್ತು ಪ್ರೌಢಶಾಲೆ ಒಳಗೊಂಡಂತೆ 44,762 ಶಾಲೆಗಳು ವಿದ್ಯಾವಾಹಿನಿ ಪೋರ್ಟ್‌ನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವು. ಕ್ಲಸ್ಟರ್ ಹಂತದಿಂದ ತಾಲೂಕು ಹಂತಕ್ಕೆ 1,836 ಶಾಲೆ ಗಳು, ತಾಲೂಕು ಹಂತದಿಂದ 612 ಶಾಲೆಗಳು ಜಿಲ್ಲಾ ಹಂತದವರೆಗಿನ ಮೌಲ್ಯಮಾಪನದಲ್ಲಿ ಭಾಗಿಯಾಗಿದ್ದವು. ಇದರಲ್ಲಿ 204 ಶಾಲೆಗಳನ್ನು ಪ್ರತಿ ತಾಲೂಕಿಗೆ ಒಂದರಂತೆ ಆಯ್ಕೆ ಮಾಡಲಾಗಿದೆ. ಅದರಲ್ಲೂ ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಪುಟ್ಟ ಗ್ರಾಮದ ಈ ಶಾಲೆಗೆ ಪ್ರಶಸ್ತಿ ದೊರೆತಿರುವುದು ಇತರ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.
ಹೊಸವೀಡು ಹುಂಡಿ ಶಾಲೆ ಚಿಕ್ಕದಾದರೂ ಸುಂದರವಾಗಿದೆ. ಈ ಶಾಲೆಗೆ ಪ್ರಶಸ್ತಿ ಬಂದಿರುವುದು ಶ್ಲಾಘನೀಯ ವಿಷಯ. ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರ ಜತೆಗೆ ಎಸ್‌ಡಿಎಂಸಿ ಕಾರ್ಯ ನಿರ್ವಹಣೆಯಲ್ಲೂ ಉತ್ತಮವಾಗಿದೆ. ಈ ಶಾಲೆಯ ಮುಖ್ಯಶಿಕ್ಷಕ ಹನುಮಂತರಾಜು ಹಾಗೂ ಶಿಕ್ಷಕ ನಾಗೇಶ್ ಅವರ ಶ್ರಮ, ಉತ್ತಮ ಕಲಿಕೆಯ ವಾತಾವರಣದಿಂದ ಪ್ರಶಸ್ತಿ ಬಂದಿರುವುದು ನನಗೆ ಮತ್ತು ತಾಲೂಕಿಗೆ ಹೆಮ್ಮೆ ತರುವ ವಿಚಾರ.
ಎಂ. ಮಹೇಶ್ ಕ್ಷೇತ್ರ ಶಿಕ್ಷಣಾಧಿಕಾರಿ ನಂಜನಗೂಡು
ಈ ಪ್ರಶಸ್ತಿಯ ಗೌರವ ಸಂಪೂರ್ಣವಾಗಿ ಹೊಸ ವೀಡುಹುಂಡಿ ಗ್ರಾಮದವರಿಗೆ ಸಲ್ಲಬೇಕು. ಗ್ರಾಮಸ್ಥರ ಸಹಕಾರದಿಂದ ಇಂತಹ ಪ್ರಶಸ್ತಿ ಲಭಿಸಿದೆ. 1 ಲಕ್ಷ ರೂ.ನಲ್ಲಿ ಶಾಲೆಗೆ ಪ್ರಿಂಟರ್, ಇನ್‌ವರ್ಟರ್, ವಾಟರ್ ಪ್ಯೂರಿಫೈ, ಗ್ರಂಥಾಲಯ, ನಲಿಕಲಿ ಕುರ್ಚಿ, ಟೇಬಲ್, ತರಗತಿಗೆ ಡೆಸ್ಕ್‌ಗಳನ್ನು ಖರೀದಿ ಮಾಡಿ ಶಾಲಾ ದಾಖಲಾತಿ ಹೆಚ್ಚಳ ಮಾಡಲು ಪ್ರಯತ್ನಿಸಲಾಗುವುದು.
ಹನುಮಂತರಾಜು ಮುಖ್ಯ ಶಿಕ್ಷಕ, ಹೊಸ ವೀಡುಹುಂಡಿ ಸರ್ಕಾರಿ ಶಾಲೆ, ನಂಜನಗೂಡು
ನಮ್ಮ ಶಾಲೆ ಒಂದು ಕಾಲದಲ್ಲಿ ನಂಜನಗೂಡಿನಲ್ಲಿಯೇ ಸಮಸ್ಯೆ ಹೊಂದಿದ್ದ ಶಾಲೆಯಾಗಿತ್ತು. ಈ ಶಾಲೆಗೆ ಹೊಸದಾಗಿ ಬಂದ ಮುಖ್ಯ ಶಿಕ್ಷಕ ಹನುಮಂತರಾಜು ಹಾಗೂ ಸಹ ಶಿಕ್ಷಕ ನಾಗೇಶ್ ಅವರ ಕಾರ್ಯಕ್ಷಮತೆ, ಗ್ರಾಮಸ್ಥರೊಂದಿಗಿನ ಒಡನಾಟ, ಉತ್ತಮ ಚಟುವಟಿಕಗಳಿಂದ ಉತ್ತಮ ಶಾಲೆಯಾಗಿದೆ. ಪುಷ್ಠಿ ಕಾರ್ಯಕ್ರಮದಡಿ 1 ಲಕ್ಷ ರೂ. ಬಂದಿರುವುದು ಹೆಮ್ಮೆ ತಂದಿದೆ.
ಎಸ್.ಎಸ್.ಶಿವಪ್ರಸಾದ್ ಪಿಎಸಿಸಿ ನಿರ್ದೇಶಕರು, ಹೊಸವೀಡುಹುಂಡಿ ಗ್ರಾಮ
ಆರು ತಿಂಗಳ ಹಿಂದೆ ಎಸ್‌ಡಿಎಂಸಿ ಅಧ್ಯಕ್ಷನಾಗಿ ನಾನು ಆಯ್ಕೆಯಾದೆ. ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ದಾನಿಗಳು, ಗ್ರಾಮಸ್ಥರ ಸಹಕಾರದಿಂದ ಪ್ರಶಸ್ತಿ ಲಭಿಸಿದೆ. ಸರ್ಕಾರದ ಬಿಸಿಯೂಟ ಯೋಜನೆ ಬಗ್ಗೆ ಅತೀವವಾಗಿ ಕಾಳಜಿ ವಹಿಸಿ ಪ್ರತಿ ಪದಾರ್ಥ ಮಕ್ಕಳಿಗೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ.
ಪಾಂಡುರಂಗ ಅಧ್ಯಕ್ಷರು, ಎಸ್‌ಡಿಎಂಸಿ, ಹೊಸವೀಡು ಹುಂಡಿ ಶಾಲೆ.