ಸುಬ್ರಹ್ಮಣ್ಯ: ಕಲಾವಿದರು ಸದಾ ಕಲಾಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಹೊಂದಿರುತ್ತಾರೆ. ಜನರ ಪ್ರೀತಿಯೊಂದಿಗೆ ಗೌರವ ಪ್ರಾಪ್ತಿಯಾಗಲು ಶ್ರದ್ಧಾಭಕ್ತಿಯಿಂದ ಕಲಾಸೇವೆ ಮಾಡಬೇಕು. 35ಕ್ಕೂ ಅಧಿಕ ವರ್ಷಗಳಿಂದ ಯಕ್ಷ ಕೃಷಿ ಮಾಡಿರುವ ಕಡಬ ಶ್ರೀನಿವಾಸ ರೈ ನಮ್ಮೂರಿನ ಹೆಮ್ಮೆ ಎಂದು ಕಲಾವಿದ ಕೆ.ಯಜ್ಞೇಶ್ ಆಚಾರ್ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದ ಐತಿಹಾಸಿಕ ತಾಣ ಕುಲ್ಕುಂದದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆದ 56ನೇ ವರ್ಷದ ಒತ್ತೆಕೋಲ ಮಹೋತ್ಸವ ಸಂದರ್ಭ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ಅಧ್ಯಕ್ಷತೆ ವಹಿಸಿದ್ದರು. ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಅಭಿಲಾಷ್, ನಿಕಟಪೂರ್ವ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ, ಕುಕ್ಕೆ ದೇವಳದ ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಯಕ್ಷ ಕಲಾವಿದ ಲಕ್ಷ್ಮೀಶ ದೇವರಗದ್ದೆ ಮುಖ್ಯಅತಿಥಿಗಳಾಗಿದ್ದರು. ದೈವಸ್ಥಾನ ಆಡಳಿತ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಎಸ್.ಇಂಜಾಡಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ವೆಂಕಟ್ರಾಜ್ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಕೋಶಾಧಿಕಾರಿ ರತ್ನಾಕರ ಸುಬ್ರಹ್ಮಣ್ಯ ಸ್ವಾಗತಿಸಿ ವಂದಿಸಿದರು.