ಉಪ್ಪಿನಂಗಡಿ : ಮನೆ ಸಮೀಪ ಬಂದ ಹೆಬ್ಬಾವನ್ನು ನಿರ್ಭೀತಿಯಿಂದ ಹಿಡಿದು ಗೋಣಿಗೆ ಹಾಕಿದ ದಿಟ್ಟ ಮಹಿಳೆ ಶೋಭಾ ಅವರನ್ನು ಉಪ್ಪಿನಂಗಡಿಯ ಆಟೋ ಚಾಲಕ-ಮಾಲೀಕ ಸಂಘದ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.
ಉಪ್ಪಿನಂಗಡಿ ಸಮೀಪದ ಉರುವಾಲು ಗ್ರಾಮದ ಕುಪ್ಪೆಟ್ಟಿ ಕಲ್ಪನೆ ನಿವಾಸಿಯಾಗಿರುವ ಸಂತೋಷ್ ಎಂಬುವರ ಪತ್ನಿ ಶೋಭಾ ಮನೆ ಸಮೀಪ ಬೆಕ್ಕೊಂದನ್ನು ತಿನ್ನುವ ಯತ್ನದಲ್ಲಿದ್ದ ಹೆಬ್ಬಾವಿನ ಬಾಲವನ್ನು ಹಿಡಿದು ಎಳೆದು ಪುರುಷರು ಯಾರೂ ಹತ್ತಿರ ಬಾರದಿದ್ದಾಗ ಸ್ಥಳದಲ್ಲಿದ್ದ ಬಶೀರ್ ಎಂಬವರಿಗೆ ಗೋಣಿ ಚೀಲ ತರಲು ತುಳುವಿನಲ್ಲಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಶೌರ್ಯ ತಂಡದಲ್ಲಿ ಕಾರ್ಯನಿರ್ವಹಿಸುವ ಶೋಭಾರವರ ಶೌರ್ಯವನ್ನು ಮೆಚ್ಚಿ ಉಪ್ಪಿನಂಗಡಿಯ ನೇತ್ರಾವತಿ ಆಟೋ ಚಾಲಕ-ಮಾಲೀಕ ಸಂಘದ ವತಿಯಿಂದ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಆಟೋ ಚಾಲಕ-ಮಾಲೀಕ ಸಂಘದ ಮುಖಂಡರಾದ ಫಾರೂಕ್ ಜಿಂದಗಿ, ಅಬ್ದುಲ್ ರಹಿಮಾನ್ ಯೂನಿಕ್, ಅಬ್ದುಲ್ ಮಜೀದ್, ಅಶೋಕ್ ಬಂಡಾಡಿ, ಅಣ್ಣಿ ಮಲ್ಲಕ್ಕಲು, ಕಲಂದರ್ ಶಾಫಿ ಮತ್ತಿತರರು ಇದ್ದರು.